"ತಾಳು. ಈ ಪ್ರದೇಶದ ನಮ್ಮವರೆಲ್ಲ ಗುಪ್ತವಾಗಿ ಒಂದೆಡೆ ಸೇರುವ ಪ್ರಮೇಯ ಬರ್ತದೆ. ಆಗ ನೋಡುವೆಯಂತೆ."
"ಅದು ಯಾವತ್ತೊ?"
"ಯಾವತ್ತೂಂತ ಈಗ್ಲೆ ಹ್ಯಾಗೆ ಹೇಳೋಣ? ಕಬ್ಬಿಣ ಕಾದಾಗ ಅಲ್ವ ಹೊಡೆಯೋದು?"
ಮಾಸ್ತರು ತನಗೆ ಹೇಳಿದ್ದನ್ನೇ ಅಪ್ಪು ಚಂದುವಿಗೆ ಹೇಳಿದ್ದ. ಅದು ಪರಿಣಾಮ ಬೀರಿತು.
"ಬೇರೆ ಮುಖಂಡರನ್ನೂ ಆಗ ನನಗೆ ತೋರಿಸ್ತೀಯಾ?"
"ಹೂಂ."
ತನಗೆ ಪರಿಚಯವಿದ್ದ ದೊಡ್ಡ ಮುಖಂಡ ಒಬ್ಬರೇ. ಅವರ ವಿಷಯ, ತಾನು ಕಂಡಿದ್ದ ಅವರ ಸಂಗಡಿಗರು ಕೆಲವರ ವಿಷಯ, ಆಗಲೆ ಅಲ್ಲಿಯೆ ಚಂದುವಿಗೆ ಎಲ್ಲವನ್ನೂ ಹೇಳಬೇಕೆಂಬ ಬಯಕೆ ಅಪ್ಪುವಿನ ಹೃದಯದಲ್ಲಿ ಒತ್ತರಿಸಿ ಬಂತು. ಆದರೂ ರಹಸ್ಮ ಚಟುವಟಿಕೆಯ ಉಗ್ರನಿಯಮಾವಳಿಯ ನೆನಪಾಗಿ, ಆತ ಸುಮ್ಮನಾದ.
ಚಂದು ಒಂದೆರಡು ಪುಸ್ತಕ ಓದಿ ಶಾಲೆ ಬಿಟ್ಟವನು. ಅಲ್ಲಿ ಸಂಪಾದಿಸಿದ ಅಕ್ಷರಜ್ಞಾನವನ್ನು ಉಳಿಸಿಕೊಳ್ಳಬೇಕೆಂಬ ಹಿರಿಯಾಸೆಯೇನೂ ಶಾಲೆ ಬಿಟ್ಟಾಗ ಆತನಿಗಿರಲಿಲ್ಲ. ಕ್ರಮೇಣ, ಪುಸ್ತಕ ಕೈಗೆತ್ತಿಕೊಳ್ಳುವ ಅಭ್ಯಾಸವೂ ತಪ್ಪಿಹೋಗಿ, ತಡೆಯಿಲ್ಲದೆ ಏನನ್ನೂ ಓದಲಾಗುತ್ತಿರಲಿಲ್ಲ. 'ನನ್ನ ವಿದ್ಯೆ ಏನಿದ್ದರೂ ಸಹಿ ಹಾಕೋದಕ್ಕೆ ಮಾತ್ರ'--ಎಂದು ಆತ ಸುಮ್ಮನಾಗಿದ್ದ. ಆದರೆ ಅಪ್ಪುವಿನ ಒಡನಾಟದಿಂದ, ರೈತ ಚಳವಳಿಯ ಸಂಬಂಧದಿಂದ ಆತನ ಜ್ಞಾನದಾಹ ಮತ್ತೆ ಕಾಣಿಸಿಕೊಂಡಿತು. ಆತ ಪತ್ರಿಕೆಯೋದಿದ; ಕರಪತ್ರಗಳನ್ನೋದಿದ. ಹೀಗೆ ಅಂಗಡಿಯಲ್ಲಿ ಕುಳಿತಾಗ ಅಲ್ಲಿಗೆ ಬಂದವರೊಡನೆ ಹರಟೆ ಹೊಡೆಯಲು ಆತನಿಗೆ ಬೇರೆ ವಿಷಯಗಳು ದೊರೆತುವು.
ವಿದ್ಯಾರ್ಜನೆಯ ಹುಚ್ಚು ಆ ಅವಧಿಯಲ್ಲಿ ಹೆಚ್ಚಾಯಿತು. ಮಾಸ್ತರ ಸೂಚನೆಯಂತೆ, ನಾಲ್ಕಾರು ಹೆಂಗಸರಿಗೆ ಚಿರುಕಂಡ ಅಕ್ಷರಾಭ್ಯಾಸ ಮಾಡಿಸಿದ. ಬಳಿಕ ಆ ಹೆಂಗಸರೇ ವಿದ್ಯೆಯ ಸೊಡರನ್ನೆತ್ತಿಕೊಂಡು ಕತ್ತಲಿದ್ದಲ್ಲಿ ಬೆಳಕು ಅಂಟಿಸಲು ಹೊರಟರು.
ಈ ದಿನಗಳಲ್ಲಿ ನೆಮ್ಮದಿ ಕೆಡಿಸಿಕೊಂಡು ಸಿಡುಕನಾದ ವ್ಯಕ್ತಿ ನಂಬಿಯಾರರು. ಮೊದಲು ಭಾವಿಸಿದ್ದಂತೆ ಈ ಮಾಸ್ತರು ಪ್ರಾಮಾಣಿಕನೆಂದು ಒಪ್ಪಿಕೊಳ್ಳಲು ಈಗ