ಪುಟ:Chirasmarane-Niranjana.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

ಆಕೆಯ ಬಡಗಂಟಲಿಗೆ ಎಲ್ಲಿಲ್ಲದ ಬಲ ಬಂದಿತ್ತು.ರೈತರೆಲ್ಲ ಗಾಡಿಯನ್ನೂ ಬೆದರಿದ ಎತ್ತುಗಳನ್ನೂ ಆ ಇಬ್ಬರನ್ನೂ ಸುತ್ತುವರಿದರು. ಒಬ್ಬರು ಆಡಿದುದು ಇನ್ನೊಬ್ಬರಿಗೆ ಅರ್ಥವಾಗದ ಹಾಗೆ, ಆ ಪ್ರದೇಶವೆಲ್ಲ ಮಾತಿನಿಂದ ತುಂಬಿ ಹೋಯಿತು. ಕೃಷ್ಣನ್ ನಾಯರ್ ಸಂದಾಯಮಾಡದೇ ಉಳಿಸಿದ್ದ ಇನ್ನೂರು ರೂಪಾಯಿಗಳ ಸಾಲವೊಂದಿತು. ಬರಿಯ ಗೇಣಿಗಾಗಿ ಕಾಯದೆ ಇಡಿಯ ಪೈರನ್ನೇ ವಶಪಡಿಸಿಕೊಂಡು ತಮ್ಮ ಹಣವನ್ನು ಮರಳಿ ಪಡೆಯಲು ಜಮೀನ್ದಾರರು ನಿರ್ಧಸಿದ್ದರು. ಆದರಿಂದ ಕೃಷ್ಣನ್ ನಾಯರಿಗೆ ಮತ್ತಷ್ಟು ನಷ್ಟವಾಗುವುದೆಂಬುದೂ ಮತ್ತೆ ಜೀವನ ನಿರ್ವಹಣಕ್ಕೊಸ್ಕರ ಸಾಲ ಪಡೆಯಲು ಜಮೀನ್ದಾರರನ್ನೇ ಆತ ಅವಲಂಬಿಸಬೇಕಾಗುತ್ತದೆಂದೂ ಸ್ಪಷ್ಟವಾಗಿತ್ತು.

  ರೈತಬಾಂಧವರೆಡೆಯಲ್ಲಿ ನಿಂತಿದ್ದ ಕೃಷ್ಣನ್ ನಾಯರ್ ಧೈರ್ಯಗೆಡಲಿಲ್ಲ. "ನ್ಯಾಯ ನೋದ್ಕಳ್ಳಿ" ಎಂದು ವಾದಿಸಿದ. ಮಾತು ಬಲವಾಯಿತು. ನಂಬಿಯಾರರ ಭಟರ ಬೆದರಿಕೆಯ ನುಡಿಗಳಿಗೆ ರೈತರ ಅಣುಕುನುಡಿಗಳು ಸರಿ ಮಿಗಿಲೆನಿಸಿದ ಉತ್ತರವಾದುವು. ಅರ್ಧ ಘಂಟೆಯ ಹೊತ್ತು ಪರಿಸ್ಥಿತಿ ಹೀಗೆಯೇ ಉಳಿದು, ಗಾಡಿಯೂ ಆಳುಗಳೂ ಬಂದ ದಾರಿಯಲ್ಲೇ ಹಿಂತಿರುಗಬೇಕಾಯಿತು . ನೆರೆದಿದ್ದವರೆಲ್ಲ ಬೇಗಬೇಗನೆ ಪೈರನ್ನು ಹೊತ್ತು ಕೃಷ್ಣನ್ ನಾಯರ ಅಂಗಳಕ್ಕೆ ಸಾಗಿಸಿದರು.
  ಆ ಕೆಲಸ ಮುಗಿಯುವ ಹೊತ್ತಿಗೆ ಚಿರುಕಂಡನ ತಂದೆಯೆಂದ:
"ಜಮೀನ್ದಾರರು ಸೋತದ್ದನ್ನು ನನ್ನ ಜೀವಮಾನದಲ್ಲಿ ಇದೇ ಮೊದಲ್ನೇ ಸಲ ನಾನು ಕಂಡದ್ದು!"
ಕಣ್ಣ ಗೆಲುವಿನ ಧ್ವನಿಯಲ್ಲಿ ಹೇಳಿದ: 

"ಇದೆಂಥ ಸೋಲು ಮಾವ? ಈಗ ಶುರುವಾಗಿದೆ ಅಷ್ಟೆ, ಮುಂದೆ ನೋಡುವಿರಂತೆ!"

 ಆದರೆ ಅಪ್ಪುವಿನ ತಂದೆ ಎಚ್ಚರಿಕೆಯ ಮಾತನ್ನಾಡಿದ:
"ಇದು ಇಷ್ಟೆಲ್ಲ ಸುಲಭ ಅಂತ ತಿಳಿದೀರೇನು? ಈ ಭತ್ತ, ಕಣಜ ಸೇರೋದಕ್ಮುಂಚೆ ಜಮೀನ್ದಾರರು ಮತ್ತೊಮ್ಮೆ ಬರದೇ ಇದ್ದರೆ ಆಮೇಲೆ ಹೇಳಿ."
  ಕೋರನೆಂದ:
"ಭತ್ತದ ಮಾತು ಯಾಕೆ? ರಾತ್ರೆಯೋ ನಾಳೆಯೋ ಹೆಚ್ಚು ಜನ ಬಂದು ಈ ಪೈರನ್ನು ಒಯ್ಯಬಹುದು."

ಅವರು ಮಾತುಗಳನಾಡುತ್ತಿದ್ದರು. ಆದರೆ ಕೃಷ್ಣನ್ ನಾಯರ ಗಂಟಲು