ಪುಟ:Chirasmarane-Niranjana.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

 "ಇವತು ನೀವು ಇಷ್ಟೆಲ್ಲ ಮಾಡಿದ್ದು ನನಗೋಸ್ಕರ, ನಾನು ನಿಮ್ಮತೇಲಿ ಬರಬೇಕೂಂತ. ಈಗಿನ ಸ್ಥಿತೀಲಿ ನಾನಂತೂ ಬರೋಹಾಗಿಲ್ಲ. ದಯವಿಟ್ಟ ನೀವೆಲ್ಲ ಸಮ್ಮೇಳನಕ್ಕೆ ಹೋಗ್ನನ್ನಿ."

ಆ ಮಾತಿಗೆ ಯಾರೂ ಏನನ್ನೂ ಪ್ರತಿ ಹೇಳಲಿಲ್ಲ, ಎಲ್ಲರೂ ಪರಸ್ಪರರ ಮುಖ ನೋಡಿದರು. ಕೊನೆಗೆ ಕೋರನೆಂದ: "ನಾನು ಬಂದು ಆಗ್ಬೇಕಾದ್ದೇನು? ನನಗೆ ಅರ್ಥಾವಾಗೋದು ಅಷ್ಟರಲ್ಲೇ ಇದೆ. ನಾನು ಇಲ್ಲೇ ಇರ್ತೇನೆ.' ಆ ಮಾತನ್ನು ವಿಮರ್ಶಿಸುತ್ತ ಚಿರುಕಂಡ ನುಡಿದ:

"ಅರ್ಥವಾಗೋದಿಲ್ಲ ಅನ್ನೋದೆಲ್ಲ ಬಿಟ್ಟಿಡಿ ಕೋರಣ್ಣ. ಹಾಗಲ್ಲ, ಯಾರಾದರೂ ಒಬ್ಬಿಬ್ಬರು ಇಲ್ಲೇ ಇರಬೇಕಾದದ್ದು ಧರ್ಮ. ನೀವು ಇರೋ ಹಾಗಿದ್ದರೆ ಸಂತೋಷವೇ. ಅಂತೂ ಹೋಗುವ ಕಾರ್ಯಕ್ರಮ ರದ್ದಾಗಬಾರ್ದು."

"ಹೇಗೆ ಹೇಳಿದರೂ ಒಂದೇ ನಿನ್ನ ಮಾತೇ ಇರಲಿ, ನಾನು ಬುದ್ಧಿವಂತ ಅಂತಲೇ ಒಪೊಳ್ಳೋಣ" ಎಂದ ಕೋರ ನಗುತ್ತ. ಪ್ರಯಾಣದ ಸಿದ್ದತೆಗಾಗಿ ಅವರೆಲ್ಲ ತಮ್ಮ ಗುಡಿಸಲುಗಳತ್ತ ಹೊರಟಾಗ ಕೋರ ಇಳಿಧ್ವನಿಯಲ್ಲಿ ಅಪ್ಪುವಿಗೆಂದ: "ಹೋಗ್ತ್ತಾ ಮಾಸ್ತರಿಗೆ ಹೇಳ್ಬಿಡು ನಾನು ಇಲ್ಲೇ ಇದೇನೇಂತ."

ಕಯ್ಯೂರಿನ ಎಂಟು ಜನ ರೈತರು, ತಳಿಪರಂಬ ಜಾತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳಿ ಸಮ್ಮೇಳನಕ್ಕೆ ಹೋದರು. ರಾತ್ರಿಯೇ ರೈತರು ಜಾತ್ರೆಗೆ ಹೋದ ವಾರ್ತೆ ನಂಬಿಯಾರರಿಗೆ ಸಿಗದೆ ಇದುದರಿಂದ, ಕೃಷ್ಣನ್ ನಾಯರನ ಪೈರಿನ ವಿಷಯದಲ್ಲಿ ಅವರೇನನ್ನೂ ಮಾಡಲಿಲ್ಲ. ರೇಗಿ ಕಿಡಿ ಕಾರಿದರೂ,ತಮಗಿರುವ ವಿರೋಧ ಎಷ್ಟೆಂಬುದನ್ನು ಮೊದಲು ಅಳೆದು ನೋಡಬೇಕೆಂಬ ವಿವೇಕ ಅವರಿಗಿತ್ತು. ಅದರ ಫಲವಾಗಿ, ಕೋರ ಮತ್ತು ಕೃಷ್ಣನ್ ನಾಯರ್ ನಸುಕಿನಲ್ಲಿ ಒಂದಿಷ್ಟು ಜೊಂಪು ಹತ್ತಿದ ಕಣ್ಣುಗಳನ್ನು ತಿಕ್ಕಿಕೊಂಡು ಎದ್ದಾಗಲೂ, ಅಂಗಳದಲ್ಲಿ ಪೈರಿನ ರಾಶಿ ನಿಶ್ಚಿಂತೆಯಿಂದ ಮಲಗಿಯೇ ಇತ್ತು.
  ಮಾಸ್ತರು ಸಮ್ಮೇಳನಕ್ಕೆ ಹೋಗಲ್ಲಿಲ. "ಬನ್ನಿ ನಾವಿದ್ದೇವೆ" ಎಂದು ರೈತರು ಕರೆದರೂ ಅವರು ಹೊರಡಲಿಲ್ಲ... ಬೆಳಗ್ಗೆ ಎದು ಅವರು 'ಸಾಹಿತ್ಯ' ಓದುತ್ತಾ ಕುಳಿತಿದ್ದರು. 'ಮಾಸ್ತರೆ' ಎಂಬ ಕೂಗು ಕೇಳಿದಾಗ ಒಮ್ಮೆ ಅವರಿಗೆ ಅಳುಕಿತು. ಒಡನೆಯೇ 'ಸಾಹಿತ್ಯ'ವನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟು, ಕರೆದ ಸ್ವರವನ್ನು ಗುರುತಿಸಿ ಅವರು ಹೊರಕ್ಕೆ ಬಂದರು.