ಪುಟ:Chirasmarane-Niranjana.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೪೬ ಚಿರಸ್ಮರಣೆ "ಆಮೇಲೇನಾಯು?" "ಆಗೋದೇನು?ನಿನ್ನೆ ಸುಮ್ನಿದ್ದೆ. ಇವತ್ತು ನಮ್ಮ ಅಂಗಳಕ್ಕೆ ಪೈರು ಹೊರಿಸಿ ಹಾಕ್ತೇನೆ. ಯಾವನು ಅಡ್ಡಿ ಮಾಡ್ತಾನೋ ಬರ್ಲಿ. ಅಲ್ಲ ಮಾಸ್ತರೆ, ನನ್ನ ತಾಳ್ಮೆ ನೋಡಿ ಒಮ್ಮೊಮ್ಮೆ ನನಗೇ ಆಶ್ಚರ್ಯವಾಗ್ತದೆ. ನಾನು ಸೀದಾ ಮನುಷ್ಯ. ಖಂಡಿತವಾದಿ. ಹೇಳ್ತೀನೆ ಕೇಳಿ. ಇವರಿಗೆ ನಂಬೂದಿರಿಯಂತ ಯಜಮಾನರು ಸಿಗ್ಬೇಕು. ಬೆಣ್ಣೆಲಿ ಕೂದಲು ತೆಗೆಯೋವಂಥ ಮಾತಾಡ್ತಾ ಆಡ್ತಾ ಹ್ಯಾಗೆ ಅರೀತಾನೆ ಅಂತೀರಾ! ಮುಠಾಳ ನನ್ಮಕ್ಳು ಧೂ!"

 ಮಾಸ್ತರು, ನಂಬಿಯಾರರ ಆಲಾಪನೆಗೆ ಕಿವಿಗೊಡುತ್ತಿದ್ದರೂ ಮನಸ್ಸೆಲ್ಲ ಕೃಷ್ಣನ್ ನಾಯರನ್ನು ಕುರಿತು ಚಿಂತಿಸುತ್ತಿತ್ತು. ಆತನಾಗಲೀ ಕೋರನಾಗಲೀ ಏನೂ ಮಾಡುವಂತಿರಲಿಲ್ಲ. ಪ್ರತಿಭಟನೆಯಿಂದ ಪ್ರಯೋಜನವೂ ಇರಲಿಲ್ಲ.ನಿನ್ನೆಯ ಸಾಧನೆ, ಸಮ್ಮೇಳನ ಮುಗಿಸಿ ಉತ್ಸಾಹದಿಂದ ಅವರೆಲ್ಲ ಹಿಂದಿರುಗುವ ವೇಳೆಗೆ ಮಣ್ಣಗೂಡುವ ಪ್ರಮೇಯ.... ಆದರೆ ಹಾಗಾಗುವುದನ್ನು ತಡೆಯಲು ಹಾದಿಯೇ ಇರಲಿಲ್ಲ. ಅದು ಅನಿವಾರ್ಯವಾಗಿತ್ತು.....
ಹೆಚ್ಚು ಮಾತಿಗೆ ನಿಲ್ಲದೆ ನಂಬಿಯಾರರು ಹೊರಟೇ ಹೋದರು. ಜತೆಯಲ್ಲಿ ಬಂದಿದ್ದ ಆಳೂ ಒಡೆಯನನ್ನು ಹಿಂಬಾಲಿಸಿದ...
  ....................

ಮಾಸ್ತರು ನಿರೀಕ್ಷಿಸಿದ್ದಂತೆಯೇ ಆಯಿತು.ಜಮೀನ್ದಾರರ ಎಂಟು ಜನ ದೂತರು ಕೃಷ್ಣನ್ ನಾಯರನ ಅಂಗಳದಲ್ಲಿದ್ದುದನ್ನೆಲ್ಲ ವಶಪಡಿಸಿಕೊಂಡರು, ಅಂತಹ ಪರಿಸ್ಥಿತಿಯಲ್ಲಿ ಅರ್ಥವಿಲ್ಲದ ಪ್ರತಿಭಟನೆಯನ್ನು ಕೋರನಾಗಲೀ ನಾಯರಾಗಲೀ ಮಾಡಲಿಲ್ಲ. ದೂರದೂರದಿಂದಲೇ ಇತರ ರೈತರು ನಡೆಯುತ್ತಿದುದನ್ನೆಲ್ಲ ನೋಡಿದರು. ಅವರಲ್ಲಿ, ಇಬ್ಬರು ಜಮೀನಾರರ ಒಕ್ಕಲುಗಳೂ ಇದ್ದರು; ಕೆಲವರು ಸ್ವತಂತ್ರ ರೈತರೂ ಇದ್ದರು. ಆದರೆ ಯಾರೂ ಕೃಷ್ಣನ್ ನಾಯರನ ರಕ್ಷಣೆಗೆ ಬರಲಿಲ್ಲ. ಇದು ಎಷ್ಟೋ ಕಾಲದಿಂದ ನಡೆದು ಬರುತ್ತಿದ್ದುದರ ಸಹజ ಪುನರಾವರ್ತನೆ-ಎಂದು ಅವರು ಸುಮ್ಮನಾದರು. ರಾತ್ರೆ ಕೋರ, ತನ್ನನ್ನು ಯಾರೂ ಹಿಂಬಾಲಿಸಿದಂತೆ ಎಚ್ಚರ ವಹಿಸಿ ಬಂದು, ಮಾಸ್ತರನ್ನು ಸಂಧಿಸಿದ. "ಕೃಷ್ಣನ್ ನಾಯರನ್ನು ಗುಡಿಸಿಲಿನಿಂದ ಹೊರಹಾಕಿಲ್ಲ, ಅಲ್ವ?" ಎಂದು ಮಾಸ್ತರು ಕೇಳಿದರು. "ಇಲ್ಲ."