ಪುಟ:Chirasmarane-Niranjana.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೪೭

    ಯೋಚಿಸಿ ಮಾಸ್ತರೆಂದರು:
    "ಬಹುಶಃ ಹೊರ ಹಾಕಲಾರರು. ಈಗಿನ ಪರಿಸ್ಥಿತೀಲಿ ಬೇರೆ ರೈತರನ್ನ ಹೊಂದಿಸೋದು ಜಮೀನ್ದಾರರಿಗೆ ಸುಲಭವಲ್ಲ,"
 "ಅದೇನೋ ನಿಜ. ಆದರೆ ಕೃಷ್ಣನ್ ನಾಯರಿಗೆ ತುಂಬಾ ಕಷ್ಟವಾಗ್ತದೆ."ಬಹಳ ಹೊತ್ತು ಸುಮ್ಮನಿದು ಮಾಸ್ತರು ಹೇಳಿದರು:
  "ಹೋದವರೆಲ್ಲ ವಾಪಸು ಬರಲಿ. ಆಮೇಲೆ ಒಟ್ಟಾಗಿ ಮಾತಾಡೋಣ. ಕೋರ, ನಿನ್ನೆ ನಮಗೆ ಜಯವಾಯ್ತು. ಇವತ್ತು ಸೋಲು. ಪುನಃ ಈ ಸೋಲನ್ನು ಜಯವಾಗಿ ನಾವು ಮಾರ್ಪಡಿಸ್ಬೇಕು."
   ಹೇಗೆ ಎಂಬುದು ಅರಿವಾಗದಿದ್ದರೂ ಧೈರ್ಯದ ಆ ಮಾತು ಕೋರನಿಗೆ ಮೆಚ್ಚುಗೆಯಾಗಿ, ಆತನ ಮುಖದಲ್ಲಿ ಉಲ್ಲಾಸದ ಕಳೆ ಮೂಡಿತು.
  ...........................
   ಮಾರನೆಯ ಮುಂಜಾವದಲ್ಲಿ, ತಳಿಪರಂಬ ಜಾತ್ರೆಗೆ ಹೋಗಿದ್ದವರೆಲ್ಲ ಮರಳಿ ಬಂದರು. ರೈತ ಜಾಗೃತಿಯನ್ನು ಕಣ್ಣಾರೆ ಕಂಡ ಅನುಭವ ಅವರೆಲ್ಲರಲ್ಲಿ ಹೊಸ ಶಕ್ತಿಯನ್ನು ತುಂಬಿತ್ತು. ಪ್ರವಾಸದಿಂದ ದಣಿದಿದ್ದರೂ ಅವರ ಬೆನ್ನುಗಳು ನೇರವಾಗಿದ್ದುವು. ಕಣ್ಣುಗಳು ನಿದ್ದೆ ಕೆಟ್ಟು ಕೆಂಪಾಗಿದ್ದರೂ ಹೊಳೆಯುತ್ತಿದ್ದವು. ಕಪೋಲಗಳು ಬತ್ತಿದ್ದರೂ, ಆತ್ಮವಿಶ್ವಾಸದ ನಗೆ ತುಟಿಗಳ ಮೇಲೆ ನರ್ತಿಸುತ್ತಿತ್ತು. 
  ಅಪ್ಪು ಮತ್ತು ಚಿರುಕಂಡ ನೇರವಾಗಿ ಮಾಸ್ತರಲ್ಲಿಗೆ ಹೋಗಿ, ಉತ್ಸಾಹದ ಅಂಟುಜಾಡ್ಯವನ್ನು ತಾವು ಹೊತ್ತು ತಂದೆವೆಂದುತಿಳಿಸಿದರು. ತಮ್ಮಂತೆಯೇ ಇದ್ದ ನೂರಾರು ಜನರನ್ನು, ಹಳೆಯ ಸ್ನೇಹಿತರಾದ ಪ್ರಭು-ಧಾ೦ಡಿಗ-ಕೇಳಪ್ಪನ್ ಮತ್ತಿತರರನ್ನು, ರೈತ ನಾಯಕರನ್ನು ಅವರು ಕಂಡುಬಂದಿದ್ದರು.
   ಆ ಹುಡುಗರ-ಹುಡುಗರೆಂದು ಇನ್ನು ಕರೆಯಲಾಗದಂತಹ ಯುವಕರ-ನಡೆನುಡಿಯಲ್ಲಿನ ನೂತನ ದಿಟ್ಟತನವನ್ನು ಕಂಡು, ಒಂದೇ ಸಮ್ಮೇಳನ ಅವರಲ್ಲಿ ಮಾಡಿದ್ದ ಮಾರ್ಪಾಟನ್ನು ಗಮನಿಸಿ ಮಾಸ್ತರಿಗೆ ಹರ್ಷವೆನಿಸಿತು.
   ಹಿಂತಿರುಗಿದವರು ತಾವು ಊರಲ್ಲಿ ಇಲ್ಲದೆ ಇದ್ದಾಗ ಕೃಷ್ಣನ್ ನಾಯರಿಗೊದಗಿದ ದುರ್ಗುತಿಯ ವಿವರ ತಿಳಿದು ಬೇಸರಪಟ್ಟರು. ಆದರೆ ಅವರು ತುಂಬಿತಂದಿದ್ದ ಉತ್ಸಾಹದ ಹೊನಲಿನೆದುರು ಆ ಬೇಸರ ಕ್ಷಣಿಕವಾಯಿತು.

ಇವರೆಲ್ಲ ಜಾತ್ರೆಗೆ ಹೋಗಿದ್ದರೆಂದೇ ಹಳ್ಳಿಯಲ್ಲೆಲ್ಲರೂ ನಂಬಿದ್ದುದರಿಂದ ರಾತ್ರೆಯ ಹೊತ್ತು ಗೋಪ್ಯವಾಗಿ ಅಪ್ಪುವಿನ ಮನೆಯಲ್ಲಿ ಅವರು ಒಂದು ಗೂಡುವುದು ಕಷ್ಟವಾಗಲಿಲ್ಲ.