ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿರಸ್ಮರಣೆ
೧೪೯

ನಮ್ಮ ರೈತರು ಕೂಡ ಅಲ್ಲಿಗೆ ಹೋಗಿದ್ದರಲ್ಲ?"

ಪರಿಸ್ಥಿತಿ ವಿಷಮಿಸುವುದಕ್ಕೆ ಇನ್ನು ಬಹಳ ಕಾಲವಿಲ್ಲವೆಂದು ಗೊತ್ತಿದ್ದರೂ ತಾವಾಗಿಯೇ ದುಡುಕಬಾರದೆಂದು ಮಾಸ್ತರೆಂದರು:

"ಇದ್ದರೂ ಇರಬಹುದು. ನನಗಂತೂ ಯಾರೂ ಹೇಳಿಲ್ಲ.

" ಆಹಾ!ಆಹಾ!"

ಅದರ ಮಾರನೆಯ ದಿನವೂ ನಂಬಿಯಾರರು ಬುಸುಗುಟ್ಟುತ್ತ ಬಂದರು.

"ಮಾಸ್ತರೆ! ಒಂದು ಸುದ್ದಿ ಕೇಳಿದಿರೋ?'ಮಾತೃಭೂಮಿ' ಪತ್ರಿಕೆಗೆ ಕಳಿಸಿದರೂ ಕಳಿಸ್ಬಹುದು."

ಶಾಂತವಾಗಿರಲು ಯತ್ನಿಸುತ್ತ ಮಾಸ್ತರೆಂದರು:

"ಏನಾಯ್ತು?"

"ಕಯ್ಯೂರಿನಲ್ಲಿ ಇನ್ನೆರಡು ದಿವಸದಲ್ಲಿ ರೈತಸಂಘ ಸ್ಥಾಪನೆಯಾಗ್ತದಂತೆ! ಹಹ್ಹಾ!"

"ಹಾಗೇನು? ಯಾರಂದರು?"

ನಂಬಿಯಾರರು ಕೆಂಗಣ್ಣಿನಿಂದ ಮಾಸ್ತರರನ್ನೆ ನೋಡಿ, "ಥೂ!" ಎಂದು ಉಗುಳಿದರು. ಒಮ್ಮೆಲೆ ಸಂಬೋಧನೆ ಏಕವಚನಕ್ಕಿಳಿಯಿತು; ಕಂಠ ಮತ್ತಷ್ಟು ನಿಷ್ಠುರವಾಯಿತು.

"ಒಳ್ಳೆ ಕನ್ನಡಿ ಹಾವು ಕಣಯ್ಯ ನೀನು! ಎಂಥವ್ನನ್ನ ಇಷ್ಟು ಕಾಲ ಸಾಕ್ದೆ! ಅಬ್ಬ!"

ಇನ್ನು ಸ್ವಾಭಿಮಾನದ ರಕ್ಷಣೆ ತಪ್ಪಾಗದೆಂದು ಮಾಸ್ತರು ನಂಬಿಯಾರರನ್ನು ನೇರವಾಗಿ ನೋಡಿ ನುಡಿದರು:

"ನೀವು ವಿಶ್ವಸ್ಥ ಸಮಿತಿಯ ಪ್ರಮುಖರು, ನಾನು ಶಾಲೆಯ ಉಪಾಧ್ಯಾಯ. ಕೆಲಸ ಎಷ್ಟಿದೆಯೋ ಅಷ್ಟು ಮಾತಾಡಿ!"

ನಂಬಿಯಾರರು ಹಾವಿನ ಹೆಡೆ ಮುಟ್ಟಿದ ಹಾಗಾಗಿ,ಒಮ್ಮೆ ಅಳುಕಿ, ಮತ್ತೆ ರೌದ್ರದ ಮುಖವಾಡ ಧರಿಸಿ, ದರ್ಪದಿಂದ ಅಂದರು:

"ನಮ್ಮ ಶಾಲೆಯ ವಾರ್ಷಿಕ ಪರೀಕ್ಷೆಗೆ ಇನ್ನೆಷ್ಟು ದಿವಸ ಇದೆ?"

"ಒಂದು ತಿಂಗಳು."

"ಅಷ್ಟು ದಿವಸ ತೆಪ್ಪಗಿದು ಕೆಲಸ ಮಾಡಿ. ಪರೀಕ್ಷೆ ಮುಗಿದ್ಮೇಲೆ ಚಾರ್ಜು ನನಗೆ ವಹಿಸ್ಕೊಟ್ಟು ಇಲ್ಲಿಂದ ಗಾಡಿ ಬಿಡಿ!"