ಪುಟ:Chirasmarane-Niranjana.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮೊದಲ ಅಧ್ಯಾಯಕ್ಕೆ ಮುನ್ನ

ಬೆಂಗಳೂರಿನಿಂದ ಮಂಗಳೂರಿಗೆ ಮಂಗಳೂರಿನಿಂದ ಚರ್ವತ್ತೂರಿಗೆ...
ಬನ್ನಿ. ರೈಲುಗಾಡಿ ಇಲ್ಲಿಂದ ಹೊರಡುವುದು ಇನ್ನೂ ತಡ. ಊರು ಇರುವುದು ಆ ಭಾಗದಲ್ಲಿ. ಹಿಂದಕ್ಕೆ ಸಾಗಿ, ರೈಲುಕಂಬಿಯನ್ನು ದಾಟಿ, ಹೊರಟುಹೋಗೋಣ. ಇಷ್ಟು ಜನ ಯಾಕೆ ಬರಬೇಕಿತ್ತು ಎಂದಿರಾ? ಒಳ್ಳೆ ಪ್ರಶ್ನೆ! ಈ ದಿನದ ಮಹೋತ್ಸವಕ್ಕೆ ಇಷ್ಟೊಂದು ದೂರದಿಂದ ಬಂದ ಪ್ರೇಕ್ಷಕರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಊರವರು ಏನೆಂದಾರು?
ಯಾಕೆ ಅತ್ತ ನೋಡ್ತಿದ್ದೀರಿ? ಟಿಕೆಟ್ ಕಲೆಕ್ಟರು ಕರೆಯಬಹುದೆಂದೆ? ಇಲ್ಲಿ ಕೊಡಿ ಟಿಕೆಟ್. ಆತನಿಗೆ ಕಳುಹಿಸಿಕೊಡ್ತೇವೆ. ಅವನಾಗಿ ನಮ್ಮನ್ನೆಂದೂ ಕರೆಯಲಾರ. ಇಲ್ಲಿ ಇಳಿದು ನಮ್ಮ ಹಳ್ಳಿಗೆ ಹೋಗುವವರಲ್ಲಿ ಮೋಸಗಾರರು ಯಾರೂ ಇಲ್ಲ ಎಂಬುದು ಆತನಿಗೆ ಗೊತ್ತಿದೆ.
ಎಚ್ಚರದಿಂದ ದಾಟಿ, ಕೈಕಂಬದ ಸಾಲು ತಂತಿ ಕೆಳಗಿದೆ. ಎಡವಿ ಬಿದ್ದೀರಿ. ಬನ್ನಿ ಹೀಗೆ ನಿಂತು, ರೈಲುಗಾಡಿಯತ್ತ ಯಾಕೆ ದಿಟ್ಟಿಸಿದಿರಿ? ಅದೊಂದು ವಿಚಿತ್ರ ಅನುಭವ, ಅಲ್ಲ? ಸಹಸ್ರ ಸಹಸ್ರ ಜನರನ್ನು ಹೊತ್ತು, ನಿಮ್ಮೊಬ್ಬರನ್ನೇ ಇಳಿಯಬಿಟ್ಟು, ಮುಂದೆ ಸಾಗುವ ಉಗಿ ಶಕಟ. ಸಮುದ್ರದಂಡೆಯುದ್ದಕ್ಕೂ ದಕ್ಷಿಣಾಭಿಮುಖವಾಗಿ, ಮುಂದಕ್ಕೆ.
ಹೊಲಗಳ ನಡುವೆ ನಡೆದೇ ನಿಮಗೆ ಅಭಾಸವಿದೆಯೊ ಇಲ್ಲವೊ. ಏನಂದಿರಿ? ನೀವೂ ಹಳ್ಳಿಯಲ್ಲೆ ಹುಟ್ಟಿದವರೆಂದೆ?ಮಣ್ಣಿನ ಮಗುವೆಂದೆ? ಸಂತೋಷ. ನಾನೂ ಹಾಗೆಯೇ ಊಹಿಸಿದ್ದೆ.
ಈ ಹೊಲದ ಅಂಚುಗಳ ಮೇಲೆ ಒಬ್ಬೊಬ್ಬರೇ ನಡೆಯಬೇಕು. ಒಬ್ಬರ ಹಿಂದೊಬ್ಬರು, ಸಾಲುಸಾಲಾಗಿ. ಮುಂದಿನವರು ನಿಂತರೆ ಹಿಂದಿನವರೂ ನಿಲ್ಲಬೇಕು. ನಗರದಲ್ಲಿ ಮೋಟಾರು ವಾಹನಗಳು ಒಂದರ ಹಿಂದೊಂದು ಹೋಗುವುದಿಲ್ಲವೇ? ಹಾಗೆ.
ಬಿಸಿಲು ರಣಗುಡುತ್ತಿದ್ದರೂ ವಿಶಾಲವಾದ ಭೂಮಿ ಹಸುರಾಗಿದೆ, ನೋಡಿದಿರಾ? ಇದಕ್ಕೆ ಕಾರಣ ನದಿ. ಅದೋ, ದೂರದಲ್ಲಿ ಹರಿಯುತ್ತಿದೆಯಲ್ಲ, ಕಂಡೂ ಕಾಣಿಸದ ಹಾಗೆ? ತೇಜಸ್ವಿನಿ. ಹೆಸರು ಚೆನ್ನಾಗಿದೆ, ಎಂದಿರಾ? ಇಲ್ಲದೆ! ನಾಮಕರಣ ಮಾಡಿದವರು ನಮ್ಮ ಜನ.