ಪುಟ:Chirasmarane-Niranjana.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮

ಚಿರಸ್ಮರಣೆ

ಕಂಡಿದ್ದೇವೆ. ಇಲ್ಲಿಂದಲೇ ಕಾಣುತ್ತಿವೆಯಲ್ಲವೆ ಆ ಧ್ವಜಸ್ತಂಭಗಳು, ಆ ಬಾವುಟಗಳೆರಡು? ಒಂದು, ಮೂರು ಬಣ್ಣಗಳ ರಾಷ್ಟ್ರಧ್ವಜ; ಇನ್ನೊಂದು, ಶ್ರಮಜೀವಿಗಳ ಹೋರಾಟದ ಗುರಿಯನ್ನು ಸೂಚಿಸುವ ನಿಶಾನೆ. ಅಗೋ, ಆ ಬಳಿಕ ಸ್ವಲ್ಪ ತಗ್ಗಿನಲ್ಲಿ ಬೇರೆ ನಾಲ್ಕು ಬಾವುಟಗಳು. ಕಯ್ಯೂರಿನ ನಾಲ್ವರು ವೀರರ ನಾಲ್ಕು ಮನೆಗಳ ಮೇಲೆ ಅವು ಹಾರಾಡುತ್ತಿವೆ.
.....ಅಂತೂ ಕಯ್ಯೂರು ಸೇರಿದಿರಿ! ದೇಶದ ನಕಾಶೆಯಲ್ಲಿ ಇದೊಂದು ಕುಗ್ರಾಮ. ಭಾರತ ಭೂಮಿಯ ಸಹಸ್ರ ಸಹಸ್ರ ಹಳ್ಳಿಗಳಲ್ಲೊಂದು. ಆದರೆ ನಮ್ಮ ಪಾಲಿಗಿದೇ ಊರು, ಇದೇ ಮಹಾನಗರ.
.....ಬನ್ನಿ, ಹೀಗೆ ಬನ್ನಿ. ಇದು ಕಯ್ಯೂರಿನ ಸಂಘದ ಕಟ್ಟಡ. ಬೇರೆ ಬೇರ ಪ್ರಾಂತಗಳಿಂದ ಬಂದಿರುವ ಅತಿಥಿಗಳೆಲ್ಲ ಇಲ್ಲಿ ನೆರೆದಿದ್ದಾರೆ ನಿಮ್ಮ ಹಾಗೆಯೇ ಬರಹಗಾರರು ಕೆಲವರು, ಇತರ ಕ್ಷೇತ್ರಗಳ ಪ್ರತಿಷ್ಠಿತ ಪ್ರಮುಖರು, ಆಯಸ್ಸಿನ ಬಹುಭಾಗವನ್ನೆಲ್ಲ ಕಾರಾಗಾರದಲ್ಲಿ ಕಳೆದಿರುವ ವೃದ್ಧನಾಯಕರು. ಬನ್ನಿ, ಪರಿಚಯ ಮಾಡಿಕೊಳ್ಳಿ.
"ಏ ಸಂಗಾತಿ!"
.....ಅದೋ, ಕಾರ್ಯದರ್ಶಿ ಗದರಿಸುತ್ತಿದ್ದಾರೆ. ಮೊದಲು ನಿಮ್ಮ ಊಟ ವಸತಿಯ ಏರ್ಪಾಟು ಮಾಡಬೇಕಂತೆ. ಈ ಗಡಿಬಿಡಿಯಲ್ಲಿ ಅಷ್ಟು ನನಗೆ ಹೊಳೆಯಬೇಡವೆ? ದೂರದಿಂದ ಪ್ರವಾಸ ಮಾಡಿ ಬಂದಿರುವ ನಿಮಗೆ ವಿಶ್ರಾಂತಿ ಅಗತ್ಯ ಎನ್ನುವುದರ ಅರಿವಾದರೂ ನನಗಿರಬೇಡವೆ?
ಬನ್ನಿ, ತೇಜಸ್ವಿನಿ ನದಿಯಲ್ಲಿ ಸ್ನಾನ ಮಾಡುವಿರಂತೆ. ಆ ಬಳಿಕ ಒಂದಿಷ್ಟು ಆಹಾರ. ಅದಾದ ಮೇಲೆ ವಿಶ್ರಾಂತಿ.

* * *

ಎದ್ದಿರಾ? ಆಗಲೇ ಎರಡು ಸಾರೆ ನೋಡಿ ಹೋದೆ, ಮುಗುಳ್ನಗುತ್ತಮಲಗಿದ್ದಿರಿ. ಯಾವ ಕನಸು ಕಾಣುತ್ತಿದ್ದಿರೋ! ಎಬ್ಬಿಸಲು ಮನಸ್ಸಾಗಲಿಲ್ಲ.
ನೋಡಿ, ಆಗಲೇ ಬಿಸಿಲು ಮಾಯವಾಗಿದೆ. ಇನ್ನೊಂದು ಘಳಿಗೆಯಲ್ಲೇ ಕತ್ತಲು.
ಮುಖಕ್ಕಿಷ್ಟು ನೀರು ಹನಿಸಿಕೊಳ್ಳಿ, ಏನು ತರಿಸಲಿ? ಕಾಫಿಯೆ? ಕಾಫಿಯ ಊರಿನವರು ನೀವು.... 'ನಿಮ್ಮೂರಿಗೆ ಬಂದಾಗ ನಿಮ್ಮೂರಿನ ಪಾನೀಯ' ಎಂದಿರಾ? ಜನರೊಡನೆ ಸಮರಸವಾಗಬಯಸುವ ಈ ಮನೋವೃತ್ತಿ ನನಗೆ ತಿಳಿಯದೆ?