ಪುಟ:Chirasmarane-Niranjana.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚಿರಸ್ಮರಣೆ

೧೯

ನಮ್ಮೂರಿನ ಚಹಾ ಕುಡಿದು ನೋಡಿ, ಚೆನ್ನಾಗಿದೆ.
ಹೋಗೋಣವಿನ್ನು, ಇರುಳು ಹಗಲನ್ನು ತನ್ನೆಡೆಗೆ ಬರಸೆಳೆದು ತನ್ನೊಳಗೆ ಲೀನಗೊಳಿಸುವ ದೃಶ್ಯವನ್ನು ನಮ್ಮೂರಲ್ಲಿ ನೀವು ನೋಡಬೇಕು. ಈ ಸೊಬಗು ಅದ್ವಿತೀಯ.'ಎಲ್ಲ ಊರವರೂ ಹೀಗೆಯೇ ಹೇಳ್ತಾರೆ' ಎಂದಿರಾ? ಹಹ್ಹ....! ನಿಮ್ಮೊಡನೆ ಮಾತನಾಡುವುದೇ ಕಷ್ಟ, ನನಗೆ ಗೊತ್ತು.
...ಕಣ್ಣು ಕೋರೈಸುವ ಹಾಗೆ ದೀಪಮಾಲೆ. ದೀಪಾವಳಿಯ ನೆನಪು ಬಂತೆ? ಹಗಲು ಕಂಡ ಹಳ್ಳಿಯೇ ಬೇರೆ, ಈ ಮಾಯಾನಗರಿಯೇ ಬೇರೆ, ಎನ್ನುವ ಹಾಗಿದೆಯಲ್ಲವೆ? ನಮ್ಮೂರಿಗೆ ವಿದ್ಯುಚ್ಛಕ್ತಿ ಇನ್ನೂ ಬಂದಿಲ್ಲ.(ಆದರೆ ವಿಚಾರದ ಹೊಸಬೆಳಕು ಧಾರಾಳವಾಗಿದೆ, ಧಾರಾಳವಾಗಿ...!)ಇಲ್ಲಿರುವುದೆಲ್ಲ ಎಣ್ಣೆಯ ದೀಪಗಳು, ಕಂದೀಲುಗಳು, ಚರ್ವತ್ತೂರು, ತ್ರಿಕರಪುರ, ನೀಲೇಶ್ವರ, ಹೊಸದುರ್ಗಗಳಿಂದ ಹೇರಳವಾಗಿ ತಂದಿರುವ ಪೆಟ್ರೋಮ್ಯಾಕ್ಸುಗಳು...
ಎಡಕ್ಕೆ ತೇಜಸ್ವಿನಿ ನದಿಯತ್ತ ಒಮ್ಮೆ ನೋಡಿ. ಕತ್ತಲೆಯಲ್ಲಿ ಆ ನೀರು ಕಾಣಿಸುವುದೇ ಇಲ್ಲ, ಅಲ್ಲವೆ? ಅದರೆ ಆ ಚಲಿಸುವ ಕಂದೀಲು? ನೀರ ಮೇಲಿನ ಬೆಳಕು? .... ಜನರಿನ್ನೂ ದೋಣಿಗಳಲ್ಲಿ ನದಿಯನ್ನು ದಾಟಿ ಬರುತ್ತಿದ್ದಾರೆ. ತಿಳಿಯಿತೆ? ಬಲಕ್ಕೆ ಬೆಟ್ಟಗಳತ್ತ ನೋಡಿ. ಒಣಗಿದ ತಾಳೆಯ ಗರಿಯನ್ನು ಹಿಡಿಯಾಗಿ ಕಟ್ಟಿ, ಉರಿಯುವ ದೀಪವಾಗಿ ಮಾಡಿ, ಕಯ್ಯೂರಿಗೆ ಇಳಿದು ಬರುತ್ತಿದ್ದಾರೆ. ಕೊಳ್ಳಿದೆವ್ವಗಳು! ನಾನು ಎಳೆಯ ಮಗುವಾಗಿದ್ದಾಗ ನಿದ್ದೆಹೋಗದೆ ಹಟಮಾಡಿದರೆ ನಮ್ಮಜ್ಜಿ ಹೆದರಿಸುವುದಿತ್ತು: "ಕೊಳ್ಳಿದೆವ್ವ ಬರ್ತದೆ. ಹಾಂ" ಅಂತ. ಸುಳ್ಳು ಸುಳ್ಳೇ!.... ದೊಡ್ಡವನಾದ ಮೇಲೆ ನನಗೆ ತಿಳಿಯಿತು! ದೆವ್ವ ಯಾವುದು, ಮನುಷ್ಯರು ಯಾರು, ಎನ್ನುವುದೆಲ್ಲ ಚೆನ್ನಾಗಿ ತಿಳಿಯಿತು.
ವಿಶೇಷ ಸಂಭ್ರಮಕ್ಕೆಂದು ಧ್ವನಿವರ್ಧಕ ಯಂತ್ರಯನ್ನು ತಂದಿದ್ದಾರೆ. ತಲಚೇರಿಯಿ೦ದ. ಹೀಗೆ ಹೇಳಿದೆನೆ೦ದು, ನಮ್ಮೂರವರಿಗೆ ಬಲಶಾಲಿ ಗಂಟಲಿಲ್ಲ---ಎಂದು ತಿಳಿಯಬೇಡಿ! ನದಿಯ ಆ ದಡದಿಂದ 'ಕೂ' ಎಂದರೆ ಸಾಕು, ಅರ್ಧ ಮೈಲಿ ಈಚೆಯ ಈ ದಡಕ್ಕೆ ಕೂಗು ಕೇಳಿಸುತ್ತದೆ. ಕಾಡಿನ ನಡುವಿನಿಂದ ಕರೆಕೊಟ್ಟರೆ ಸಾಕು, ಈ ಬೀಡಿಗೆ ಅದು ಬಂದು ತಲುಪುತ್ತದೆ. ಆದರೂ ಸಭೆ, ಭಾಷಣ, ಹಾಡುಗಾರಿಕೆ, ನಾಟಕ ಎಂದಮೇಲೆ ಧ್ವನಿವರ್ಧಕ ಯಂತ್ರ ಒಂದಿರುವುದೇ ಸೊಗಸು ಅಲ್ಲವೆ?
ಬನ್ನಿ. ಉತ್ಸವ ಏರ್ಪಾಟಾಗಿರುವ ಬಯಲಿನತ್ತ ಹೋಗೋಣ. ಸಿಂಗರಿಸಿದ ಸಭಾಂಗಣ. ತಂತಮ್ಮ ಚಾಪೆಗಳನ್ನು ಅವರವರೇ ಹೊತ್ತು ತಂದು