ಪುಟ:Chirasmarane-Niranjana.pdf/೧೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಚಿರಸ್ಮರಣೆ ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ. ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. "ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.