ಪುಟ:Chirasmarane-Niranjana.pdf/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಚಿರಸ್ಮರಣೆ ಚೆನ್ನಾಗಿ ಬೆಳೆ ಬರುವ ಜಾಗ. ಕ್ರಮೇಣ ಆತನನ್ನು ಹೊರಹಾಕಿ, ಹೆಚ್ಚು ಗೇಣಿಗೆ ಬೇರೆ ಯಾರಿಗಾದರೂ ಕೊಡಬಹುದೆಂದು ಆಗ ಅವರು ಯೋಚಿಸಿದ್ದರು. ಆದರೆ ಮುಂದೆ ಹಾಗೆ ಮಾಡುವುದು ದುಸ್ಸಾಧ್ಯವಾಗಿತ್ತು. ಅದೇ ರೀತಿ, ಕಾರ್ಯಗತವಾಗದೇ ಹೋದ ಯೋಜನೆಗಳು ಇನ್ನೆಷ್ಟೋ ಸಾಲ ವಸೂಲಿಯಂತೂ ನಿಂತೇಹೋಗಿತ್ತು. ಬಡ್ಡಿಯ ರೂಪದಲ್ಲಿ ಸಾಕಷ್ಟು ಹಣ ಬಂದಿತ್ತು ನಿಜ. ಆದರೆ ಅಸಲಿಗೇ ಒದಗಿತ್ತು ಮೋಸ. "ಹೂಂ!" ಎಂದು ತಮ್ಮಷ್ಟಕ್ಕೆ ಹೂಂಕರಿಸಿದರು ನಂಬಿಯಾರರು. ಬಂದೂಕವನ್ನೆತ್ತಿ ಸುಮ್ಮನೆ ಅತ್ತಿತ್ತ ಗುರಿ ಇಟ್ಟರು. ಸೈನ್ಯ ಭರ್ತಿಗೆ ಅಧಿಕಾರಿಗಳು ಬಂದಿದ್ದಾಗ, ನಿಷ್ಪ್ರಯೋಜಕರಾದ ಇಬ್ಬರನ್ನೇ ಅವರು ಕೊಟ್ಟಿದ್ದರು. ಆದರೂ ಜನಬಲ ಆ ಸಂಖ್ಯೆಯ ಮಟ್ಟಿಗೆ ಕಡಮೆಯಾಗಿತ್ತು, ಹಿಂದೆ ತಮ್ಮ ಬಳಿ ಇದ್ದ ಬೇಟೆಯ ನಾಯಿ ಸತ್ತುಹೋದಮೇಲೆ ಮುಂದೆ ನಿಧಾನವಾಗಿ ಒಂದು ಜೋಡಿ ಜಾತಿ ನಾಯಿಗಳನ್ನೇ ತರಬೇಕೆಂದು ಅವರು ಇಚ್ಛಿಸಿದ್ದರು. ಆದರೆ ಇಂತಹ ಪರಿಸ್ಥಿತಿಯಲ್ಲಿ ಆ ವಿಷಯ ಅವರಿಗೆ ಇಷ್ಟವಾಗಲಿಲ್ಲ... ಬಂದೂಕನ್ನು ಮತ್ತೆ ಮತ್ತೆ ನೋಡುತ್ತ, ಬೇಟೆಗಾದರೂ ಹೋಗೋಣವೇ ಎನ್ನಿಸಿತು. ಅದಕ್ಕೆ ಆಳುಗಳನ್ನು ಕರೆದು ನಿರ್ದೇಶ ಕೊಡಬೇಕೆನ್ನುವಷ್ಟರಲ್ಲಿ ಬೇಸರ ಆವರಿಸಿ, ಬೇಟೆಯ ಯೋಚನೆಯನ್ನು ಅವರು ಬಿಟ್ಟುಕೊಟ್ಟರು. ಬಂದೂಕವನ್ನೆತ್ತಿ ಒಳಗಿರಿಸುತ್ತ ಅವರು ಮನಸ್ಸಿನಲ್ಲೇ ಅಂದರು; "ಬೇಟೆಗಲ್ಲದೆ ಹೋದರೆ ಇನ್ನಾವುದಕ್ಕಾದರೂ ಬಂದೂಕಿನ ಉಪಯೋಗ ಇದ್ದೇ ಇ‍ರ್ತದೆ!' ರೈತ ಸಂಘದ ಸ್ವಯಂಸೇವಕರು ಮಾತ್ರ ಹಿಡಿಯಲು ಬೀಸಲು ಕಲಿತ ಅಸ್ತ್ರವೊಂದೇ-ಲಾ‌ಠಿ, ವ್ಯಕ್ತಿಯ ಹಿತಕ್ಕಿಂತಲೂ ಸಮುದಾಯದ ಹಿತ ದೊಡ್ಡದು. ತನಗಿಂತಲೂ ಹಿರಿದು ತನ್ನ ರಾಷ್ಟ್ರ, ಅವಮಾನಕರವಾದ ದಾಸ್ಯಜೀವನಕ್ಕಿಂತಲೂ ಸ್ವಾತಂತ್ರ್ಯ ಹೋರಾಟದಲ್ಲಿ ದೊರೆಯುವ ಸಾವು ಸ್ವರ್ಗಸಮಾನ ಎನ್ನುವ ಉದಾತ್ತ ಭಾವನೆಗಳು ದಿನವೂ ಆ ಜನ ಬೆಳೆಯುವ ಹಾಗೆ ಮಾಡಿದುವು. ಈಗ ಆ ರೈತರು ನಡುಬಾಗಿದ ಬಡಗೌಡರಲ್ಲ-ತಮ್ಮ ತೋಳ ಬಲದಲ್ಲಿ ಅಚಲ ನಂಬುಗೆಯಿದ್ದ ರೈತಭಟರು, ಸಂದೇಹ ಸಂಶಯಗಳು ಯಾರನ್ನೂ ಕಾಡಲೇ ಇಲ್ಲವೆಂದಲ್ಲ; ದೌರ್ಬಲ್ಯದ ನಿಮಿಷಗಳಲ್ಲಿ ಯಾರಿಗೂ ಕಣ್ಣು ಮಸುಕಾಗಲೇ ಇಲ್ಲವೆಂದಲ್ಲ, ಆದರೂ ಅಂಥವರ ಸಂಖ್ಯೆ ಕಡಿಮೆಯಾಗಿತ್ತು.