ಪುಟ:Chirasmarane-Niranjana.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆದು ಹೋಗೋದು ಕಷ್ಟ" ಎಂದ ಯಾರೋ."ನೊಗಕ್ಕೆ ಹೂಡಿದ ಎತ್ತುಗಳ ಹಾಗೆ ಹೊಲದ ಮೇಲೆ ನಡೆದು ಹೋಗ್ತಾರೆ.ಇದೇ ಸರಿ"ಎಂದು ಇನ್ನೊಬ್ಬನೆಂದ.ಹದಿನೈದು ಜನ ಸಶಸ್ತ್ರ ಪೋಲೀಸರು ಕೈದಿಗಳ ಆ ತಂಡವನ್ನು ಒಯ್ದರು.ಹಾದಿಯಲ್ಲಿ ಕಾವಲು ನಿಂತಿದ್ದವರ ಸಂಖ್ಯೆಯನ್ನು ಎರಡೆರಡಕ್ಕೆ ಇಳಿಸಿ ಉಳಿದ ಪೋಲೀಸರೂ ಅಧಿಕಾರಿಯೂ ವಿಶ್ರಾಂತಿಗೋಸ್ಕರ ನಂಬಿಯಾರರ ಮನೆಗೆ ನಡೆದರು.

ರೈತ ಹೆಂಗಸರೂ ಗಂಡಸರೂ ತಡಿಕೆಗಳೆಡೆಯಿಂದ ಬಾಗಿಲ ಮರೆಯಿಂದ ಇಣಿಕಿ, ಕೈದಿಗಳು ನಡೆದುಹೋಗುವ ದೃಶ್ಯವನ್ನು ನೋಡಿದರು.ತುಟಿ ಬಿಗಿ ಹಿಡಿದುನಿಂತಿದ್ದ ಸೊಸೆಯನ್ನು ಮಡಿಲಿಗೆಳೆದು ಚಿರುಕಂಡನ ತಾಯಿ ಚೀರಾಡಿದಳು.ಅಪ್ಪುವನ್ನು ಹೆತ್ತಾಕೆ ಅತ್ತಳು.ದೇವಕಿ ಅತ್ತೆಯನ್ನು ಸಂತೈಸಿದಳು.ಉಸಿರು ಬಿಗಿಹಿಡಿದರು-ಗಂಡಸರು ಹೆಂಗಸರೆಲ್ಲ.
ಇದು ಬೆಂಗಾಡು-ಎನ್ನುವಂತೆ ಒಣಗಿದ್ದ ನೆಲ ಭಣಗುಟ್ಟಿತು.
                      ೨

ಎಂಟು ಜನರ ಬಂಧನದೊಡನೆ ಆ ಪ್ರಕರಣ ಮುಗಿಯಿತೆಂದು ಭಾವಿಸಿದವರು ಸಂಜೆ ಸೈನ್ಯದ ಹಾಗೆ ಸದ್ದು ಮಾಡುತ್ತ ಬಂದ ಪಟಾಲಮನ್ನು ನೋಡಿ ನಡುಗಿಹೋದರು.ಪಿಸುಮಾತಿನಲ್ಲೇ,ಮಿಲಿಟಿರಿ ಬಂತೆಂಬ ಸುದ್ದಿ ಗುಡಿಸಲಿನಿಂದ ಗುಡಿಸಲಿಗೆ ಹಬ್ಬಿತು.

-"ಎಣಿಸಿ ನೋಡಿದೆ.ಅರುವತ್ತು ಜನ ಮತ್ತು ಸೈನ್ಯಾಧಿಕಾರಿ!"
-"ಕಲ್ಲಿಕೋಟೆಯಿಂದ ಬಂದಿರ್ಬೇಕು!"
-"ಪರಮಾತ್ಮ! ಇನ್ನೇನು ಗತಿ!"
-"ಅಯ್ಯೋ!"
ಬಂದುದು ಮಿಲಿಟರಿಯಾಗಿರಲಿಲ್ಲ.ಆದರೆ ಅಷ್ಟೇ ಸಮಾರ್ಥವಾಗಿದ್ದ ಮಲಬಾರ್ ಸ್ಪೆಷಲ್ ಪಡೆ-ಎಂ.ಎಸ್.ಪಿ. ಈ ಸಶಸ್ತ್ರ ದಳ ವಿಸ್ತರವಾದೊಂದು ತೋಪಿನಲ್ಲಿ ಡೇರೆ ಹೊಡೆದು  ಬೀಡುಬಿಟ್ಟಿತು.ಅದರೆ ನಾಯಕನೂ ಪೋಲೀಸ್ ಅಧಿಕಾರಿಯೂ ಪರಸ್ಪರ ಸಂಧಿಸಿದರು.ವಿಚಾರ ವಿನಿಮಯವಾಯಿತು.ನಂಬಿಯಾರರನ್ನು ಎದುರಲ್ಲಿ ನಿಲ್ಲಿಸಿಕೊಂಡು ಸಮಾಲೋಚನೆ ನಡೆಯಿತು.
ಕತ್ತಲಾಗುತ್ತಲೆ ರೈತರೂ ಅಲ್ಲಲ್ಲಿ ಗುಂಪು ಕೂಡಿದರು.ಮುಂದೇನು ಮಾಡಬೇಕು? ಇದೇ ಸರಿಯಾದ ಮಾರ್ಗ ಎನ್ನುವವರು ಅಲ್ಲಿರಲಿಲ್ಲ.ಅವರು ಪರಸ್ಪರರಿಗೆ ನೀಡಿದುದೊಂದೇ,ಭೀತಿಯ ಸಂದೇಶ.ನಾಳೆ ನಮ್ಮನ್ನೆಲ್ಲ