ಪುಟ:Chirasmarane-Niranjana.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿಡಿಯಬಹುದು, ಗುಡಿಸಲುಗಳಿಗೆ ಬೆಂಕಿ ಇಡಬಹುದು,ಹೆಂಗಸರ ಮೇಲೆ ಆತ್ಯಾಚಾರ ನಡೆಸಬಹುದು....ಎಲ್ಲರೂ ಓಡಿ ಹೋಗೋಣವೇ? ಊರು ಬಿಟ್ಟು ಓಡೋಣವೆ? ಹಾದಿಗಳಲ್ಲಿನ್ನೂ ಪೋಲೀಸರ ಕಾವಲಿದೆ....

ತುಟಿಯೊಣಗಿ ಗಂಟಲು ಆರಿ ಸ್ವರ ಹೊರಡದೆ ಮೈ ನಡುಗಿದ ಆ ಪರಸ್ಥಿತಿಯಲ್ಲಿ ಅಪ್ಪು ಕಾಣಿಸಿಕೊಂಡ! ಆ ಬಳಿಕ ಅಬೂಬಕರ್!
-"ಅಪ್ಪು!ಎಲ್ಲಿಂದ ಬಂದೆ?"
-"ಅಪ್ಪು! ಹೀಗಾಯ್ತಲ್ಲ ನಮ್ಮ ಗತಿ!"
-"ಇದಕ್ಕೆಲ್ಲಾ ಈ ಅಬೂಬಕರೇ ಕಾರಣ."
ಆ ದಿನವೆಲ್ಲ ಏನು ನಡೆಯಿತೆಂಬುದನ್ನು ಅಪ್ಪು ಕೇಳಿ ತಿಳಿದ.ಹಡಗು ಮುಳುಗುತ್ತಿತ್ತು.ಕಪ್ತಾನನಿಗೆ ಕೇಳಿಸಿದುದೊಂದೇ.ಪ್ರಯಾಣಿಕರ ಆಕ್ರಂದನಭಯದ ನುಡಿ:"ಹೆಂಗಸರ ಮೇಲೆ ಅತ್ಯಾಚಾರವಾಗಬಹುದು!" ಕಟ್ಟಾಜ್ಞೆಯೆಂಬಂತೆ ಅಪ್ಪುವೆಂದ:
"ಹುಡುಗೀರು,ಕೈಗೂಸುಗಳು,ಯುವತೀರ್ನ್ನ ಹಳ್ಳಿಯಿಂದ ಹೊರಗ ಸಾಗಿಸ್ಬೇಕು-ಈಗಿಂದೀಗ!"
"ಹ್ಯಾಗೆ? ಎಲ್ಲಿಗೆ? ಕಾವಲಿದೆ!"
"ಇರಲಿ! ನದಿ ಇಲ್ಲ? ದೋಣಿಗಳಿಲ್ಲ? ಆಚೇ ದಡಕ್ಕೆ ಹೋಗಿ ಬೆಳಗಾಗೋದರೊಳಗೆ ಅಲ್ಲಿಂದ ಚೆದರಿದರಾಯ್ತು.ಕೆಲವು ಜನ ಗಂಡಸರೂ ಜತೇಲಿ ಬರ್ಲ್ಲಿ.ಹುಂ! ಏಳಿ!"
ರೈತರು ಎದ್ದರು.ಮಗುವನ್ನೆತ್ತಿಕೊಂಡ ಜಾನಕಿ, ಚಿರುಕಂಡನ ಹೆಂಡತಿ, ದೇವಕಿ, ತವರುಮನೆಗೆ ಬಂದಿದ್ದ ಕೃಷ್ಣನ್ ನಾಯರನ ಸೊಸೆ, ಕುಂಞಂಬುವಿನ ಹೆಂಡತಿ ಶ್ರೀದೇವಿಯಮ್ಮ, ಇನ್ನೂ ಮೂವತ್ತು ನಾಲ್ವತ್ತು ಜನ....ಕತ್ತಲೆಯ ಮುಸುಕಿನಲ್ಲಿ ಇರುವೆಗಳ ಹಾಗೆ ಇವರು ನದಿಯ ದಡ ಸೇರಿದರು.ಕಯ್ಯೂರಿನ ಬಲಿಷ್ಠ ಬಾಹುಗಳು ದೊರೆತ ಒಂದು ದೋಣಿಗೆ ಹುಟ್ಟುಹಾಕಿದವು;ಚುಕ್ಕಾಣಿ ತಿರುವಿದುವು.ಮೌನವಾಗಿದ್ದ ನದಿಯ ಎದೆಯನ್ನು ಸೀಳಿ ದೋಣಿ ಎರಡು ಸಾರೆ ಆ ದಡಕ್ಕೆ ಹೋಗಿ ಬಂತು.ಅಷ್ಟು ಜನ ಹೆಂಗಸರೂ ಬೆಂಗಾವಲಿಗೆ ಕೆಲ ಗಂಡಸರೂ ಪಾರಾದರು.ಅಲ್ಲಿದ್ದ ಗಂಡಸರಿಗೆ ಅಪ್ಪುವೆಂದ:
"ನಾಳೆ ಇಲ್ಲಿ ನಡೆಯೋದು ದಬ್ಬಾಳಿಕೆ ರಾಜ್ಯ! ಸೋತ ಜನದ ಎದೆಯ ಮೇಲೆ ಪಿಶಾಚಿ ನೃತ್ಯ!...ಆದರೂ ಎಲ್ಲರೂ ಒಂದೇ ತುತ್ತಿಗೆ ಬಲಿ ಬೀಳೋದು ಸರಿಯಲ್ಲ.ನನ್ನ ಜತೆ ಕಾಡಿಗೆ ಬರುವವರು ಬನ್ನಿ.ನಾಳೆ ರಾತ್ರಿ ಹಿಂತಿರುಗುವಿರಂತೆ."