ಪುಟ:Chirasmarane-Niranjana.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ೨೧೪                                  ಚಿರಸ್ಮರಣೆ

 ಹಳ್ಳಿಯಲ್ಲೆಲ್ಲ ಅಧಿಕಾರಿಗಳು ಡಂಗುರ ಸಾರಿಸಿದರು.
    ಆದರೂ ಆ ಇಬ್ಬರ ಪತ್ತೆ ಇಲ್ಲದೆಯೇ ದಿನಗಳು ಕಳೆದುವು........
    ಅಂತೂ ಯುದ್ದ ಬಂದಿತ್ತು ಕಯ್ಯೂರಿಗೆ. ತಾವು ಗೆದ್ದ ಹಳ್ಳಿಯಲ್ಲಿ
 ಸಶಸ್ತ್ರದಳದವರು, ವಿಜೇತ ಸೈನಿಕರಂತೆ ವರ್ತಿಸಿದರು. ಅವರನ್ನು ತೃಪ್ತಿಪಡಿಸುವುದು
 ಸಾಮಾನ್ಯ ವೆಚ್ಚದ ಮಾತಲ್ಲವೆ೦ಬುದು ನಂಬಿಯಾರರಿಗೆ ಬೇಗನೆ
 ಮನದಟ್ಟಾಯಿತು. ಮರಳಿ ದೊರೆತ ಗದುಗೆಗಾಗಿ ಅವರು ತೆರುತ್ತಿದ್ದ ಬೆಲೆ ಅಪಾರ.
 ಇದಕ್ಕೂ ಒಂದು ಮಿತಿ ಇರಬೇಕು ಎಂದು ರೋದಿಸಿತು ಅವರ ಮನಸ್ಸು. ಇದಕ್ಕೆ
 ಮುಖ್ಯ ಕಾರಣ--ಸಶಸ್ತ್ರ ದಳದ ಅಧಿಕಾರಿ ಜಮೀನ್ದಾರರ ಅಂತಃಪುರದತ್ತ ನೋಟ
 ಬೀರಿದ್ದು. ಹಳ್ಳಿ ಬರಡಾಗಿತ್ತೆಂದು, ತಮ್ಮ ಮೆಚ್ಚುಗೆಯ ಒಬ್ಬಳನ್ನು ಅವರು
 ಅಧಿಕಾರಗೋಸ್ಕರ ಬಿಟ್ಟುಕೊಡಬೇಕಾಯಿತು. ಆ ನಷ್ಟವನ್ನು ಬಲು ಸಂಕಟದಿಂದ
 ಅವರು ಅನುಭವಿಸಿದರು. ರಾಜ್ಯವನ್ನು ಸದ್ಯಃ ತಮ್ಮ ವಶಕೊಟ್ಟು ಇವರೊಮ್ಮೆ
 ಹೊರಡಬಾರದೆ ಎಂದು ಗೊಣಗಿದರು.
    ಆದರೆ ಸೈನಿಕರು ಹೊರಡುವ ಸ್ಥಿತಿಯಲ್ಲಿರಲಿಲ್ಲ, ಊಟ ಉಪಾಹಾರ
 ಬಡವಾಗಬಾರದೆಂದು, ಹಳ್ಳಿಯಲ್ಲಿ ಸಿಕ್ಕಿದ ಕೋಳಿಗಳನ್ನೂ ಆಡುಗಳನ್ನೂ
 ಹಂದಿಗಳನ್ನೂ ಅವರು ಹಿಡಿದು ತಂದರು. ಅಕ್ಕಿಯನ್ನು ಶಿಬಿರಕ್ಕೆ ಸಾಗಿಸಿದರು.
 ಬಾಳೆಯ ಗೊನೆಗಳನ್ನು ಕಡಿದರು. ಮರಗಳ ಮೇಲೆ ಇನ್ನೂ ಉಳಿದಿದ್ದ ಹಣ್ಣು 
 ಹಂಪಲುಗಳನ್ನು ಸೂರೆ ಮಾಡಿದರು.
    ತೇಜಸ್ವಿನಿ ನದಿ ಅವರ ಜಲಕೇಳಿಯಿಂದ ಬೇಸತ್ತಿತು.............
    ....... ಮುಂದಿನ ಕಾರ್ಯಕ್ರಮವೇನೆಂದು ಸಶಸ್ತ್ರ ದಳದ ಅಧಿಕಾರಿಯನ್ನು
 ಕೇಳಲು ಹೊರಟ ನಂಬಿಯಾರರು, ಪ್ರಶ್ನೆಯನ್ನು ಉಚ್ಚರಿಸಿಲು ಧೈರ್ಯಬಾರದೆ
 "ಆ ನಾಯಿಗಳೆರಡು ಸಿಗಲೇ ಇಲ್ಲ" ಎಂದರು.
    'ನೋಡೋಣ. ಎಷ್ಟು ದಿವಸ ತಪ್ಪಿಸ್ಕೊಳ್ತಾವೇಂತ. ನಾವೇನು ಅವರನ್ನು 
 ಹಿಡೀದೆ ಇಲ್ಲಿಂದ ಹೊರಡೋದಿಲ್ಲ."
    ತಮ್ಮ ಸಂಕಟದ ಕಾಲ ಇನ್ನೂ ಲಂಬಿಸುವ ಸೂಚನೆ ಕಂಡು ನಂಬಿಯಾರರು
 ತಣ್ಣಗಾದರು. ಬಂದವರಿಗೆ ಸಿಗರೇಟು ಕೊಟ್ಟುಕೊಟ್ಟು ಸಾಕಾಗಿ, ಸ್ವತಃ ತಾವು
 ಸೇದುವುದನ್ನೇ ನಿಲ್ಲಿಸಿಬಿಟ್ಟಿದ್ದರು ಜಮೀನ್ದಾರರು. ಸುಮ್ಮನೆ ಕುಳಿತು ಯೋಚಿಸಿ
 ಯೋಚಿಸಿ ಅವರೆಂದರು:
    "ಅವರಿಬ್ಬರೂ ಬೇರೆ ಊರಿಗೆ ಓಡಿ ಹೋಗಿದ್ದರೂ ಹೋಗಿರಬಹುದು."
    ಕುಡಿದುದು ಸ್ವಲ್ಪ ಜಾಸ್ತಿಯಾಗಿ ಮತ್ತೇರಿದ್ದ ಆ ಅಧಿಕಾರಯೆಂದ: