ಪುಟ:Chirasmarane-Niranjana.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮ ಚಿರಸ್ಮರಣೆ

ನಡೆಯುವುದು ಗಂಡಾಂತರಕಾರಿ. ಆ ಅಪರಾತ್ರಿಯಲ್ಲಿ ನದಿ ದಾಟಿಸುವ ಅಂಬಿಗ ಯಾವನು? ಕೊನೆಗೆ ಒಬ್ಬ, ಒಂದು ರೂಪಾಯಿ ಕೊಟ್ಟರೆ ದೋಣಿ ಬಿಡುವೆನೆಂದ. ಅವರಲ್ಲಿ ಆಗ ಉಳಿದುದ್ದುದೇ ಒಂದು ಚಿಲ್ಲರೆ. "ಆಗಲಿ" ಎಂದು ಅಪ್ಪು,

   ದೋಣಿ ನಡುನೀರು ದಾಟಿದಂತೆ ಅಂಬಿಗ ಕೇಳಿದ:
   "ಯಾವೂರಿನವರು ನೀವು? ನಿಮ್ಮನ್ನೆಲ್ಲೋ ನೋಡಿದಹಾಗಿದೆ."
  ಸಾಗರದಿಂದ ಬರುತ್ತಿದ್ದ ತೇವ ತುಂಬಿದ್ದ ಉಪ್ಪು ಗಾಳಿಯಿಂದ ತುಟಿ ಸವರಿ ಅಪ್ಪುವೆಂದ:
  "ತ್ರಿಕರಪುರ, ಒಬ್ಬರಿಗೆ ಕಾಯಿಲೆ. ಡಾಕ್ಟರನ್ನು ಕರೆಯೋಕೆ ನೀಲೇಶ್ವರಕ್ಕೆ ಹೋಗ್ತಿದ್ದೇವೆ..."
   ಆ ಅಂಬಿಗ ಆದೆಷ್ಟು ನಂಬಿದನೋ ಬಿಟ್ಟನೋ.
   ದಡ ಸೇರಿದೊಡನೆ ಅಂಬಿಗ ಮೃದುಸ್ವರದಲ್ಲಿ, ದುಡ್ಡು ಕೊಡಲು ಬಂದ ಕೈಯನ್ನು ತಡೆದು ಹೇಳಿದ:
     "ಬೇಡ, ನೀವು ಹೋಗಿ."
    ಅಂಬಿಗ ತಮ್ಮ ಗುರುತು ಹಿಡಿದಿದ್ದನೆಂಬುದು ಅವರಿಗೆ ಸ್ಪಷ್ಟವಾಯಿತು.ಆ ವಿಷಯದಲ್ಲಿ ಯಾವ ಸಂದೇಹವೂ ಬೇಡವೆನ್ನುವಂತೆ ಅಂಬಿಗ ಮತ್ತೂ ಹೇಳಿದ:
    ಕೈಗಡಿಯಾರ ಜೇಬಿನಲ್ಲಿಟ್ಕೊ ಸಂಗಾತಿ. ಅದನ್ನು ನೋಡಿ ಯಾರಾದರೂ..."
    ಕೊನೆಯ ಪದವನ್ನು ಗಾಳಿ ನುಂಗಿತು. ಆಭಾರಮನ್ನಣೆಗೂ ಸ್ವರ ಹೊರಡದೇ ಹೋಯಿತು ಅಪ್ಪು-ಅಬೂಬಕರ್ ಇಬ್ಬರಿಗೂ. ಅವರು ಮುಂದೆ ನಡೆದರು. ಅಪ್ಪು ಕೈಗಡಿಯಾರವನ್ನು ಬಿಚ್ಚಿ, ಮಾಸ್ತರನ್ನು ನೆನೆಯುತ್ತ ಅದನ್ನು ಜೇಬಿನೊಳಗಿರಿಸಿದ.
   -ನೀಲೇಶ್ವರದಲ್ಲಿ,ಮಾಸ್ತರು ಸಾಮಾನ್ಯವಾಗಿ ಊರಿಗೆ ಬಂದಾಗ ಇರುತ್ತಿದ್ದ ಮನೆಗೆ ಅಪ್ಪು ಅಬೂಬಕರನೊಡನೆ ನಡೆದ. ಎರಡು ಸಾರೆ ಸಂಕೇತದ ಸದ್ದು ಮಾಡಿ ಕದ ತಟ್ಟಿದ ಮೇಲೆ ಮನೆಯವರು ಅದನ್ನು ತೆರೆದರು. ಆದರೆ ಅವರಿಗೆ ಅಲ್ಲಿ ದೊರೆತುದು ಗಾಬರಿಯ ಸ್ವಾಗತ. ಮನೆಯವರೆಂದರು:
   "ನಿಮಗಿನ್ನೂ ಗೊತ್ತಾಗಿಲ್ವ? ನೀವ್ಯಾಕೆ ಬಂದಿರಿ ಇಲ್ಲಿಗೆ? ಮಾಸ್ತರನ್ನು ನಿನ್ನೆ ಸಾಯಂಕಾಲ ಇಲ್ಲಿ ದಸ್ತಗಿರಿ ಮಾಡಿದ್ರು, ಯಾವನೋ ತೋರಿಸಿಕೊಟ್ಟು ದ್ರೋಹ ಮಾಡ್ದ. ನೀವು ಹೋಗಿ! ಬೇಗ್ನೆ ಹೋಗಿ!"
    ಅಂದರೆ ಎಲ್ಲಿಗೆ ಹೋಗಬೇಕು? ಧಾವಿಸಿ ಬರುತ್ತಿದ್ದ ಹಗಲು ಹೊತ್ತು ಅವರು ಎಲ್ಲಿರಬೇಕು?"
    ವಿವೇಚನೆಯ ಸಾಮರ್ಥ್ಯವಿಲ್ಲದೆ ಬಾಗಿಲ ಚೌಕಟ್ಟಿಗೊರಗಿ ನಿಂತಿದ್ದ