ಪುಟ:Chirasmarane-Niranjana.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೧೯

ಅಪ್ಪುವನ್ನು ಕುರಿತು ಮನೆಯವರು ಗಡುಸಾಗಿಯೇ ಹೇಳಿದರು:

  "ಇನ್ನೂ ಕೋಳಿ ಕೂಗಿಲ್ಲ. ಬೇಕಾದಷ್ಟು ಹೊತ್ತಿದೆ...ಹೊರಟ್ಟಿಡ್ಡಿ!"
  ಇಬ್ಬರೂ ಬೀದಿಗಿಳಿದರು. ಪಾದಗಳು ಮೆಲ್ಲನೆ ಮುಂದಕ್ಕೆ ಅಡಿ ಇಟ್ಟುವು. ಅಪ್ಪುವಿನ ಕಣ್ಣೆದುರು ಐದು ಪದಗಳು ಕುಣಿದವು:ಇನ್ನೂ ಕೋಳಿ ಕೂಗಿಲ್ಲ. ಬೇಕಾದಷ್ಟು ಹೊತ್ತಿದೆ...ಅಬೂಬಕರ್ ಕತ್ತಲೆಯಷ್ಟೇ ನೀರವವಾಗಿದ್ದ. ಮೌನವಾಗಿ ಆತ ಅಪ್ಪುವಿನ ಬಲಬದಿಯಲ್ಲಿ ನಡೆದ.
  ಊರು ದಾಟಿ ಹೊಸದುರ್ಗದ ಹಾದಿ ಹಿಡಿದಮೇಲೆ, ಬೆಳೆಗಾದೊಡನೆ, ಅವರು ಸಮುದ್ರ ತೀರಕ್ಕೆ ಬಂದರು. ಅರಬ್ಬಿ ಸಮುದ್ರದ ತೆರೆಗಳಿಗೆ ತಲೆಯೊಡ್ಡಿ ಸ್ನಾನಮಾಡಿ, ಹಗಲು ಮರಳ ರಾಶಿಯ ಮೇಲೆ ಗಾಳಿಮರಗಳ ನೆರಳಿನಲ್ಲಿ ನಿದ್ದೆ ಹೋಗಿ, ಹಸಿವು ನೀರಡಿಕೆಗಳನ್ನು ಮರೆತರು.
  -ಅವರು ಹೊಸದುರ್ಗ ಸಮೀಪಿಸಿದಾಗ ಇನ್ನೂ ನಡುರಾತ್ರೆಯಾಗಿರಲಿಲ್ಲ. ರೈಲು ನಿಲ್ದಾಣದ ಬಳಿಯಲ್ಲಿ ಡೇರೆ ಹೊಡೆದಿದ್ದ ಟೂರಿಂಗ್ ಟಾಕೀಸ್ನ್ ಸಿನಿಮಾ ಮುಗಿದು ಜನ ಅದೇ ಆಗ ಹೊರಡುತ್ತಿದ್ದರು. ಆ ಸಂತೃಪ್ತ ಜನರನ್ನು ಕಂಡು ಅಪ್ಪು ಅಬೂಬಕರ್ ಇಬ್ಬರಿಗೂ ಸಂಕಟವಾಗದಿರಲಿಲ್ಲ. ಕಯ್ಯೂರು ಹೊಗೆಯಾಡುತ್ತಿದ್ದರೆ, ಹೊಸದುರ್ಗ ನಗೆಯಾಡುತ್ತಿತ್ತು. ಅಲ್ಲಿಯೇ ಜೈಲಿನೊಳಗೆ ಕಯ್ಯೂರಿನ ಮಕ್ಕಳು ಕೈದಿಗಳಾಗಿದ್ದರೆ, ಇವರು ಸಿನಿಮಾ ನೋಡುತ್ತಿದ್ದರು. ಈ ಜನರೆಲ್ಲ ಸ್ವಾತಂತ್ರ್ಯದ ಮಹಾಯಜ್ಞಕ್ಕಾಗಿ ಎಂದಾದರೂ ಅಣಿ ನೆರೆಯುವುದು ಸಾಧ್ಯವೆ ಎನಿಸಿತು ಅಪ್ಪುವಿಗೆ. ಆದರೂ ಆ ಜನರ ಜತೆ ಸೇರಿ, ತಾವು ಸಿನಿಮಾದಿಂದ ಹಿಂತಿರುಗುತ್ತಿದ್ದವರಂತೆ ನಟಿಸುತ್ತ, ಅವರು ಊರೊಳಕ್ಕೆ ನಡೆದರು.
   ಭೇಟಿಯ ಮನೆ ತಲುಪಿದಾಗ ಒಳಗಿನ್ನೂ ದೀಪವಿತ್ತು."ಯಾರು?" ಎಂಬ ಒಳಗಿನ ಪ್ರಶ್ನೆಗೆ ಸಂಕೇತದ ಉತ್ತರ ದೊರೆತ ಬಳಿಕ, ಆ ಮನೆಯ ಮುದುಕಿ ಬಾಗಿಲು ತೆರೆದಳು.ಕೊಠಡಿಯಲ್ಲಿ ಯಾರೋ ಒಬ್ಬರು ಓದುತ್ತ ಕುಳಿತಿದ್ದರು. ಆತ "ಬನ್ನಿ" ಎಂದು ಕರೆದಂತೆ, ಅಪ್ಪು ಅವರನ್ನು ಗುರುತುಹಿಡಿದ. ಕೆಲವು ವರ್ಷಗಳ ಹಿಂದೆ ಕಯ್ಯೂರಿಗೆ ಬಂದು ರೈತದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು.
  ಬಂದವರ ಹಿಂದೆ ನಿಂತ ಮನೆಯಾಕೆಯನ್ನು ಕುರಿತು ಅವರೆಂದರು:
  "ಅಜ್ಜೀ, ಇವರಿಗೆ ಊಟಕ್ಕಿಡೋದಿಲ್ವ?"
  "ಅದನ್ನೇ ಕೇಳೋಣಾಂತ ಬಂದ" ಎಂದಳಾಕೆ.ಇವರಿಬ್ಬರಿಗೂ ಊಟವಾಗಿದ್ದರೂ ಇರಬಹುದು ಎಂದು. ಆ ಸಂದೇಹ ನಿವಾರಣೆಗಾಗಿ ಮುದುಕಿ ನಿಂತಳು. ಆದರೆ, ಅಪ್ಪು-ಅಬೂಬಕರ್ ಏನನ್ನೂ ಹೇಳಲಿಲ್ಲ. ಆ ಮೌನವನ್ನೇ ಆಕೆ