ಉದ್ಯಾನದಲ್ಲಿ ಸುಬ್ಬಯ್ಯನೊಂದು ಗರಿಹುಲ್ಲು, ಗಾಬರಿಯಾದುದಕ್ಕೆ ನಿಜವಾದ ಕಾರಣ, ಭಾರತದ ನರಕುರಿ ಆ ಹುಲ್ಲನ್ನು ಮೂಸಿ ನೋಡಿತೆಂಬುದು.
ಈಗ ಆ ಕುರಿಯನ್ನು ದಂಡಿಸುವುದಗತ್ಯ. ಆದರೆ ಅದು ಸಾಮಾನ್ಯ ದಂಡನೆಯಾಗುವಂತಿಲ್ಲ. ಇನ್ನುಳಿದ ಕುರಿಮಂದೆಗಲ್ಲ ಆ ದಂಡನೆ ಮರೆಯಲಾಗದ ಪಾಠವಾಗಬೇಕು.
ಆದರೂ ದಂಡನೆಗೆ ಮುಂಚೆ ವಿಚಾರಣೆ ಅವಶ್ಯ. ತಾವೇ ಆರೋಪ ಹೊರಿಸಿ, ತಾವೇ ವಿಚಾರಣೆ ನಡೆಸಿ, ತಾವೇ ಶಿಕ್ಷಿಸುವುದು. ಆದರೆ ಏನಂತೆ? ಅದೇ ಕಾನೂನುಬದ್ಧ ದಂಡನೆ. ಆಗ ಲೋಕದ ಕಣ್ಣಲ್ಲಿ ಬ್ರಿಟಿಷರ ನ್ಯಾಯ ನೀತಿಯ ಹಿರಿಮೆಗೆ ಚ್ಯುತಿ ಬರುವುದುಂಟೆ?
ಸೆರಮನೆಯೊಳಗೆ ಸಹಬಾಂಧವರಿಗೆ ಮಾಸ್ತರು ಅದನ್ನೇ ವಿವರಿಸಿದರು:
“ನ್ಯಾಯಸ್ಥಾನ ಅನ್ನೋದೇನು ಆಕಾಶದಿಂದ ಬಿತ್ತೆ? ಅದನ್ನು ನಿರ್ಮಿಸಿರೋದು ಸರಕಾರವೇ. ಸರಕಾರದ ಉಪಯೋಗಕ್ಕಾಗಿಯೇ ನ್ಯಾಯಸ್ಥಾನ ಇರೋದು. ಅದು ರಾಜ್ಯಯಂತ್ರದ ಒಂದು ಗಾಲಿ, ಇದನ್ನು ನಾವು ಮೊದಲೇ ತಿಳಿದಿರೋದು ಮೇಲು.
ವಿಚಾರಣೆ ತಡವಾಯಿತು. ಕೈದಿಗಳು ಎರಡು ಸಾರೆ ಸಾಮಾನ್ಯ ನ್ಯಾಯಾಧೀಶರ ಮುಖ ನೋಡಿ ಬಂದರು. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧನ ನಡೆದೇ ಇತ್ತು. ಇಬ್ಬರು ಅದೇ ತಮಾಷೆ, ಶೇಖರ ಉರುಫ್ ಪಂಡಿತ; ಮತ್ತು ಮಾಧವನ್ ಉರುಫ್ ವರ್ಮ, ವಾಸ್ತವವಾಗಿ ಆ ನಾಲ್ಕೂ ಪಂಡಿತರ ವಿವಿಧ ಹೆಸರುಗಳೇ! ಆ ಪ್ರಸ್ತಾಪ ಬಂದಾಗಲೆಲ್ಲ ಕೈದಿಗಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. 'ಪಂಡಿತರು ಸಿಗದಿರಲಿ' ಎಂದು ದಿನವೂ ಅವರು ಆಶಯ ವ್ಯಕ್ತಪಡಿಸುತ್ತಿದ್ದರು.
ಎಡೆಬಿಡದ ಮಳೆ ಸುರಿಯಿತು.
ಅಪ್ಪುವಿನ ತಮ್ಮ ಬಂದು ಅಣ್ಣನನ್ನೂ ತಂದೆಯನ್ನೂ ಭೇಟಿ ಮಾಡಿದ. ಏನನ್ನು ಹೇಗೆ ಹೇಳಬೇಕೆಂದು ಸಿದ್ಧನಾಗಿಯೇ ಬಂದಿದ್ದ ಹುಡುಗನ ಮಾತಿನಿಂದ ಎಷ್ಟೋ ವಿಷಯಗಳು ತಿಳಿದುವು. ಜೇಲರು ತಮ್ಮನ್ನೇ ನೋಡುತ್ತಿದ್ದರೂ ಆತನೆಂದ:
“ನಂಟರು ಬಂದಿದ್ದವರೆಲ್ಲ ಹೋದರು. ಈಗ ಮಳೆಗಾಲ, ಆಗಲೆ ಐದಾರು ಮಳೆ ಜೋರಾಗಿ ಬಂತು. ಪುನಃ ಸಾಗುವಳಿ ಶುರುಮಾಡಿದ್ದೇವೆ. ಅತ್ತಿಗೆ ಅವರೆಲ್ಲ ಬಂದಿದ್ದಾರೆ."