ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿರಸ್ಮರಣೆ
೨೩೫

ಅಂತೂ ಸಶಸ್ತ್ರದಳದ ಹಿಂಸೆ ಮುಕ್ತಾಯವಾಗಿತ್ತು. ಊರು ಬಿಟ್ಟಿದ್ದವರೆಲ್ಲ ಮರಳಿದ್ದರು, ಆ ಬಳಿಕ.

“ನಾನು ನೀಲೇಶ್ವರದ ಶಾಲೆಗೆ ಹ್ಯಾಗೆ ಹೋಗ್ಲಿ? ಮನೇಲಿ ಯಾರಿದ್ದಾರೆ ನೋಡ್ಕೊಳ್ಳೋರು? ಇಲ್ಲಿಗೆ ಸಾಕು. ಇನ್ನು ಹೋಗೋದಿಲ್ಲ. ಕುಂಞಂಬು ತಮ್ಮ ರಾಮ ಮಾತ್ರ ಹೋಗ್ತಾನಂತೆ.”

ಅದು ಸ್ವಂತದ ವಿಷಯ. ಅನಂತರ:

'ಅಣ್ಣ, ನಿನಗೆ ಮೊದಲ್ನೇ ಸಲ ಕಾಯಿಲೆಯಾಗಿತ್ತು ನೋಡು. ಆಗ ಒಬ್ಬರು ವೈದ್ಯರು ಔಷಧಿ ಕೊಟ್ಟಿಲ್ವ? ಅವರು ಪುನಃ ಬಂದಿದ್ರು."

ಜೇಲರು ಕುಳಿತೇ ಇದ್ದ. ಆದರೂ ಪಂಡಿತರು ಕಯ್ಯೂರಿಗೆ ಬಂದು ಹೋಗಿದ್ದರೆಂಬ ಮುಖ್ಯ ಸುದ್ದಿ ಒಳಕ್ಕೆ ನುಸುಳಿಯೇಬಿಟ್ಟಿತು !

“ಅಮ್ಮನೂ ಬರ್ತೆನೆ ಅಂತ ಹಟ ಹಿಡೀತಾಳೆ, ಮುಂದಿನ ತಿಂಗಳು ಜತೇಲಿ ಕರಕೊಂಡ್ಬರ್ಲಾ?"

ಅಪ್ಪು ತಂದೆಯ ಮುಖ ನೋಡಿದ. ಅಲ್ಲಿ ಯಾವ ಪ್ರತಿಕ್ರಿಯೆಯನ್ನೂ ಕಾಣಲಿಲ್ಲ. ಉದ್ವೇಗ ತುಂಬಿದ ಧ್ವನಿಯಲ್ಲಿ ತಾನೇ ಹೇಳಿದ:

"ಬೇಡ, ನಾವೆಲ್ಲ ಚೆನ್ನಾಗಿದ್ದೇವೇಂತ ಹೇಳು. ವಿಚಾರಣೆ ಮುಗಿಸ್ಕೊಂಡು ಬೇಗನೆ ಬಂದಿದ್ದೇವೆ. ಓಣಂ ಹಬ್ಬದ ಹೊತ್ತಿಗೆ ಊರಲ್ಲಿರುವೆ ಅಂತ ಹೇಳು.

ಮನೆಮನೆಗೂ ಹೋಗಿ ಹೇಳು.*

"ಹುಂ.."

....ಹಗಲು ಹೊತ್ತು ಕೊಠಡಿಗಳ ಹೊರಗೆ, ಚಚ್ಚೌಕವಾಗಿದ್ದ ಒಳ ಅಂಗಣದಲ್ಲಿ ಸೇರುತ್ತಿದ್ದ ಬಾಂಧವರಿಗೆಲ್ಲ ಅಪ್ಪು ತಮ್ಮ ತಂದ ಸುದ್ದಿಯನ್ನು ಮತ್ತೆ ಮತ್ತೆ ವಿವರಿಸಿ ಹೇಳಿದ. ಒಂದೊಂದು ಮಾತಿನ ಮೇಲೂ ವ್ಯಾಖ್ಯೆಯಾಯಿತು. 'ಪಂಡಿತರು ಈ ಪರಿಸ್ಥಿತೀಲಿ ಹಳ್ಳಿಗೆ ಹೋಗಬಾರದಿತ್ತು' ಎಂದು ಆಕ್ಷೇಪಿಸಿದವರೇ ಹೆಚ್ಚು ಜನ. ಮಾಸ್ತರು ಮತ್ತು ಚಿರುಕಂಡ, "ಎಚ್ಚರಿಕೆಯಿಂದಲೇ ಹೋಗಿದ್ದಾರೆ, ಯಾರೂ ಹೋಗದೆ ಇದ್ದರೆ ಜನರಿಗೆ ಸಮಾಧಾನವಿರದೇನು?" ಎಂದು ಎಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ.

ಆದರೆ ಕಯೂರಿನಿಂದ ಅಂತಹ ಸಂದೇಶ ಪ್ರತಿದಿನವೂ ಬರುವುದು ಸಾಧ್ಯವಿತ್ತೆ? ಎಲ್ಲರಿಗೂ ಆಸೆ ತಮ್ಮ ಸಂಬಂಧಿಕರು ಭೇಟಿಗೆ ಬಂದರಾಗುತ್ತಿತ್ತು ಎಂದು. ಆದರೆ ಅಷ್ಟೊಂದು ದೂರದಿಂದ ಅಷ್ಟೊಂದು ರೂಪಾಯಿ ಖರ್ಚು ಮಾಡಿ ಅವರೆಲ್ಲ ಬರುವಹಾಗಿತ್ತ?