ಪುಟ:Chirasmarane-Niranjana.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಯಾಕೇಂತ ಕೇಳ್ಲಿಲ್ವೆ ಅಮ್ಮ?"-ಚಿರುಕಂಡನ ಪ್ರಶ್ನೆಯಲ್ಲಿ ಕಾತರದ ಛಾಯೆ."ಸಾಕು ಬಿಡೋ! ನಾನೇನು ಮಗುವೆ ಹೇಳೋದಕ್ಕೆ?" -ನೊಂದ ಧ್ವನಿಯಲ್ಲಿ ಅಪ್ಪುವಿನ ಉತ್ತರ. ಮುಂದೆ ಅಪ್ಪು, ಹಿಂದಿನಿಂದ ಚಿರುಕಂಡ ಇಬ್ಬರೂ ಹೊಲಗಳನ್ನು ಹಿಂದೆ ಬಿಟ್ಟು ನದೀ ದಂಡೆಯತ್ತ ನಡೆದರು. ಅದು ನದಿಯನ್ನು ದಾಟುವ ಜಾಗ-ಕಡವು. ಅದರ ಮೇಲಕ್ಕೂ ಕೆಳಕ್ಕೂ ಬಂಡೆಕಲ್ಲುಗಳಿದ್ದವು, ಬಟ್ಟೆ ಒಗೆಯುವ ಕಲ್ಲುಗಳು. ಅದೇ ಸ್ನಾನದ ಘಟ್ಟ. ಅಲ್ಲಿಯೇ ಇದ್ದ ಕಾಡುಮರವನ್ನೇರಿ, ನೀರಿನ ವಿಸ್ತಾರಕ್ಕೂ ಚಾಚಬಯಸಿದ್ದ ರೆಂಬೆಗಳ ಮೇಲೆ ನಡೆದುಹೋಗಿ,ಆಳದ ನೀರಿಗೆ ಮೀನಾಗಿ ಧುಮುಕುವುದು ಅಪ್ಪುವಿನ ಪ್ರೀತಿಯ ಆಟ. ಆಗ ಅವನ ಸಂಗಡಿಗರು ಹಲವಾರು ಜನ. ಚಿರುಕಂಡನಿಗೂ ಈಸು ಬರುತ್ತಿತ್ತು.ಆದರೆ ಜಲಕೇಳಿಯಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ. ಆದರೆ ಈ ಬೆಳಗ್ಗೆ ಅಪ್ಪು ಮತ್ತು ಚಿರುಕಂಡ ದಡದಮೇಲೆ ನಿಂತು ಮೌನವಾಗಿ ಮಂದಗಮನೆಯಾಗಿ ಹರಿಯುತ್ತಿದ್ದ ತೇಜಸ್ವಿನಿಯನ್ನು ನೋಡಿದರು.ತರಕಾರಿಯ ಮೂಟೆಗಳೊಡನೆ ನೀಲೇಶ್ವರದ ಪೇಟೆಗೆ ಹೊರಟಿದ್ದ ರೈತಸ್ತ್ರೀಯರನ್ನು ಹೊತ್ತ ದೋಣಿ, ನಡುಹೊಳೆಯನ್ನು ದಾಟಿ ಆಚೆಯ ದಡದತ್ತ ಸಾಗುತ್ತಿತ್ತು. ದೃಷ್ಟಿಯ ವ್ಯೂಹದೊಳಗೆ ಬೇರೆಯೂ ದೋಣಿಗಳು ಕಂಡುಬಂದವು.ಮೀನು ಹಿಡಿಯಲೆಂದು ಹೊರಟವರ ದೋಣಿಗಳು. ಅಡ್ಡಾದಿಡ್ಡಿಯಾದ ಚಲನೆ. ಈ ಗೆಳೆಯರೂ ಆಚೆಯ ದಡಕ್ಕೆ ಹೋಗಬೇಕು. "ಏನು ಮಾಡೋಣವೋ ಚಿರುಕಂಡ ?" "ಅದೇ ಯೋಚಿಸ್ತಾ ಇದ್ದೇನೆ." "ಕಡವಿನ ದೋಣೀಲಿ ಹೋದರೆ ಕಾಸು ಕೊಡ್ಬೇಕು." "ಹೌದು. ಕಾಸೆಲ್ಲಿಂದ ತರೋಣ ಈಗ?" ಆದರೆ ಚಿರುಕಂಡನ ಮೆದುಳಿನಲ್ಲಿ ಮುನ್ನೆಚ್ಚರಿಕೆಯ ಯೋಚನೆಗಳು ಅಲೆಯಲೆಯಾಗಿ ಎದ್ದುವು. "ಎಲ್ಲಿಗೆ ಹೋಗ್ತಿರೀಂತ ದೋಣಿಯವನು ಕೇಳಿಯೇ ಕೇಳ್ತಾನೆ." "ಕೇಳಲಿ ಬಿಡು. ಏನಾದರೂ ಹೇಳಿ ದಬಾಯಿಸ್ಕೊಂಡು ಹೋದರಾಯ್ತು." "ಬೇಡ ಅಪ್ಪು. ಸಂಶಯ ಬಂದೀತು. ಹಳ್ಳೀಲೆಲ್ಲಾ ಆಮೇಲೆ ಮಾತನಾಡ್ತಾರೆ.