ಪುಟ:Chirasmarane-Niranjana.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

   ಹೊರಡುತ್ತ ರಾಜಾರಾಯರು ಮಾಸ್ತರಿಗೆಂದರು:
   "ನೋಡಿದಿರಾ? ಹ್ಯಾಗಿದೆ? ಈ ಹತ್ತು ದಿವಸ ಸಾಕ್ಷಿಗಳನ್ನು ತರಬೇತಿ ಮಾಡ್ತಾರೆ!" -

....ಹತ್ತು ದಿನಗಳ ಮೇಲೆ ವಿಚಾರಣೆಯ ಇನ್ನೊಂದು ದೃಶ್ಯ ಶುರುವಾದಾಗ ಎಲ್ಲ ಸಾಕ್ಷಿಗಳೂ ಬರಲಿಲ್ಲ. ದಿನವೂ ಇಬ್ಬರು ಮೂವರು ಬಂದರು. ಪ್ರತಿಯೊಂದು ಸಲವೂ ಯಾರು ಬರುವರೆಂದು ಕೈದಿಗಳು ತವಕಗೊಳ್ಳುವಂತಾಯಿತು. ನಾಲ್ವತ್ತು ಜನ ಇದ್ದರು ನಿಜ. ಆದರೆ ಆ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕಯ್ಯೂರಿನವರಾಗಿರಲಿಲ್ಲ! ಉಳಿದವರಲ್ಲಿ ಕೆಲವರು ಊರಿನ ಇಬ್ಬರು ಜಮೀನ್ದಾರರ ಆಳುಗಳು;ಒಬ್ಬಿಬ್ಬರು ಸಂಘವನ್ನು ಒಪ್ಪದೆ ಇದ್ದ ಶ್ರೀಮಂತ ರೈತರು; ಒಬ್ಬಿಬ್ಬರು ಆಸೆ ಆಮಿಷಗಳಿಗೆ ಒಳಗಾದ ಬಡವರು.

  ಪ್ರತಿ ದಿನ ಬಂದವರನ್ನು ಕೈದಿಗಳು ಕೆಂಗಣ್ಣಿನಿಂದ ದಿಟ್ಟಿಸಿದರು. ಆ ಸಾಕ್ಷಿಗಳು ಕೈದಿಗಳತ್ತ ನೇರವಾಗಿ ನೋಡಲೂ ಇಲ್ಲ.
  'ದೇವರಾಣೆ ಮಾಡಿ ಸಾಕ್ಷ್ಮ ಹೇಳುತ್ತೇನೆ' ಎನ್ನುತ್ತ ಸುಳ್ಳಿನ ಗಿಳಿಪಾಠ ಒಪ್ಪಿಸಿದ ಅವರನ್ನೆಲ್ಲ ರಾಜಾರಾಯರು ಪಾಟೀಸವಾಲಿನಲ್ಲಿ ಹಣಿಸಿದರು;ಒಂಟಿ ಕಾಲಮೇಲೆ ನಿಲಿಸಿ ಕುಣಿಸಿದರು. ಆಪಾದನೆಗಳನ್ನು ಸಮರ್ಥಿಸುವಂತೆ ಅವರು ಸುಳಾಡಿದ್ದರೆಂಬುದನ್ನು ಎಳೆಯ ಮಗುವೂ ತಿಳಿಯುವ ಹಾಗಿತ್ತು. ಇಷ್ಟೆಲ್ಲ ಆದ ಮೇಲೆ ನ್ಯಾಯಾಧೀಶರು ವಿಚಾರಣೆ ಇಲ್ಲಿಗೆ ಸಾಕೆನ್ನಬಹುದು, ತಮ್ಮನ್ನು ಬಂಧವಿಮುಕ್ತಗೊಳಿಸಬಹುದು-ಎಂದು ಕೆಲ ರೈತರು ಭಾವಿಸಿದರು. ಮಲೆಯಾಳ ಭಾಷೆಯಲ್ಲೆ ಇದ್ದ ಸಾಕ್ಷಗಳನ್ನೆಲ್ಲ ಕೇಳಿದ್ದ ಅವರಿಗೆ, ಆಪಾದನೆ ಸುಳ್ಳೆಂದು ರುಜುವಾತಾಗಲು ಬೇರೇನೂ ಬೇಕೆನಿಸಲಿಲ್ಲ. ಆದರೆ ನ್ಯಾಯಾಧೀಶರು ಮೌನವಾಗಿದ್ದು, ಆಗಾಗ್ಗೆ ಪ್ರಶ್ನೋತ್ತರಗಳನ್ನು ಕೇಳಿ ತಿಳಿಯುತ್ತ, ಅದೆಲ್ಲವನ್ನೂ ಬರೆದುಕೊಳ್ಳುತ್ತಲೇ ಇದ್ದರು.
  ನಡುನಡುವೆ ಭಾನುವಾರಗಳೂ ಬೇರೆ ರಜಾದಿನಗಳೂ ಬಂದವು.ಎರಡನೆಯ ತಿಂಗಳ ಹೊತ್ತಿಗೆ ಸರಕಾರೀ ಸಾಕ್ಷ್ಮ ಮುಗಿಯಿತು.
  ತಮ್ಮ ಪರವಾಗಿ ಕಯ್ಯೂರೇ ಸಾಕ್ಷ್ಮ ನುಡಿಯುವುದು ಎಂದಿದ್ದ ಅಪ್ಪು.ಆದರೆ ವಸ್ತುಸ್ಥಿತಿ ಹಾಗಿರಲ್ಲಿಲ್ಲ.ಆರೋಪಿಗಳ ವಿರುದ್ಧ ಸಾಕ್ಷ್ಮ ಹೇಳಿದವರಿಗೆ ಸರಕಾರ ಪ್ರಯಾಣಭತ್ತೆ ಕೊಡುತ್ತಿತ್ತು, ಆದರೆ, ಪರವಾಗಿ ಬರುವವರಿಗೆ ದೊರೆಯುತ್ತಿದ್ದುದು ಗೂಢಚಾರರ ವಕ್ರಕಟಾಕ್ಷ ಮಾತ್ರ. ಅಂಥ ಸ್ಥಿತಿಯಲ್ಲೂ ರೈತರು ಬರಲು ಸಿದ್ದರಿದ್ದರು; ಆದರೆ ಅವರನ್ನು ಕರೆದುತರಲು ಕಾರ್ಯಕರ್ತರಿರಲಿಲ್ಲ.