ಪುಟ:Chirasmarane-Niranjana.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೪೫೦

  "ಜಮೀನ್ದಾರರು ನಡೆಸುವ ಸುಲಿಗೆಯ ರಕ್ಷಣೆಗಾಗಿ ಪೋಲೀಸರು ಹೂಡಿರುವ ಒಳಸಂಚೇ ಈ ಪ್ರಕರಣ. ಪೋಲೀಸನೊಬ್ಬನ ಆಕಸ್ಮಿಕ ಸಾವನ್ನು ಆಧಾರವಾಗಿ ಮಾಡಿ, ಈ ಪ್ರಾಂತದ ರೈತ ಸಂಘಟನೆಯನ್ನೇ ನಿರ್ನಾಮಗೊಳಿಸಲು ಈ ಮೊಕದ್ದಮೆ ಮೂಲಕ ಯತ್ನಿಸಲಾಗಿದೆ. ಘಟನೆಯ ದಿನ ತಲಚೇರಿಯ ರಾತ್ರಿ ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರೆಂದು ಯಾವ ಸಂದೇಹಕ್ಕೂ ಆಸ್ಪದವಿಲ್ಲದಂತೆ ಸಾಬೀತಾಗಿರುವ ಮಾಸ್ತರು, ಪೋಲಿಸನ ಕೊಲೆ ಮೊಕದ್ದಮೆಯಲ್ಲಿ ಆರೋಪಿ! ಹಲವಾರು ಮೈಲುಗಳಾಚೆ ಇದ್ದ ಪ್ರಭು ಮತ್ತಿತರರು ಆರೋಪಿಗಳು!ಘಟನೆ ನಡೆದ ಸ್ಥಳದಲ್ಲೇ ಇರದಿದ್ದ ಚಿರುಕಂಡ-ಅಪ್ಪು ಮತ್ತು ಅವರಿಗೆ ಜನ್ಮಕೊಟ್ಟ ವೃದ್ಢ ರೈತರಿಬ್ಬರು ಆರೋಪಿಗಳು! ಬೇರೆ ಕೆಲವರೆಷ್ಟೋ ಜನ ಆಗ ಇದ್ದದ್ದು ತಮ್ಮ ಗುಡಿಸಲುಗಳಲ್ಲಿ, ಶಾಂತವಾಗಿ ಮೆರವಣಿಗೆ ಹೋದುದೇ ಉಳಿದವರ ತಪ್ಪು! ಇಷ್ಟೇ ಅಲ್ಲ, ಪೋಲೀಸರ ಪ್ರಕಾರ ಇನ್ನೂ ಸೆರೆಸಿಗದೇ ಇರುವ ಇಬ್ಬರು ಆರೋಪಿಗಳಿದ್ದಾರೆ. ಶೇಖರ ಉರುಫ್ ಪಂಡಿತ-ಮಾಧವನ್ ಉರುಫ್ ವರ್ಮ. ಇಂಥ ಹೆಸರಿನ ವ್ಯಕ್ತಿಗಳಾದರೂ ಇದ್ದಾರೇನು? ಈ ಹೆಸರಿನ ರೈತರು ಯಾವ ಕಾಲದಲ್ಲೂ ಕಯ್ಯೂರಿನಲ್ಲಿ ಇರಲಿಲ್ಲ ಎಂದರೆ ಖಾವಂದರಿಗೂ ಆಶ್ಚರ್ಯವಾದೀತು! ಪಂಡಿತ ಎಂಬವರೊಬ್ಬರು ಮಲಬಾರಿನ ರೈತ ಮುಖಂಡರೆಂದು ನಾನು ಕೇಳಿದ್ದೇನೆ. ಅವರು ಯಾವ ಊರಿನವರೋ ಯಾರಿಗೂ ತಿಳಿಯದು. ಅವರನ್ನು ಕಂಡವರೂ ಇಲ್ಲಿ ಇಲ್ಲ, ಇನ್ನು ವರ್ಮ ಎಂಬುವರು ಯಾರೋ? ಯಾವ ವರ್ಮ? ಯಾವ ರಾಜಮನೆತನದವರು? ಒಬ್ಬರಿಗೂ ತಿಳಿಯದು. ಆದರೆ ಸರ್ವಜ್ಞರಾದ ಪೋಲೀಸರು ಅಂಥ ಇಬ್ಬರನ್ನು ಈ ಮೊಕದ್ದಮೆಯಲ್ಲಿ ಆರೋಪಿಗಳಾಗಿ ಮಾಡಿದ್ದಾರೆ! ಇಲ್ಲಿ ರಾಜದ್ರೋಹದ ಒಳಸಂಚಿನ ಮಾತಾದರೂ ಯಾಕೆ ಬಂದಿದೆ?ನಾನು ಬಲ್ಲೆ. ರಾಜ್ಯಯಂತ್ರದ ಸಹಾಯವಿದ್ದೂ, ರೈತರು ಪೋಲೀಸನ ಕೊಲೆ ಮಾಡಿದರೆಂದು ರುಜುಪಡಿಸುವುದು ದುಸ್ಸಾಧ್ಯ ಎಂದು ಸರ್ಕಾರಿ ವಕೀಲರಿಗೆ ಗೊತ್ತಿದೆ. ಆ ಕಾರಣದಿಂದ ಸರ್ಕಾರವನ್ನು ಉರುಳಿಸಲು ಈ ಬಡ ರೈತರು ಗುಪ್ತವಾಗಿ ಸಂಚು ನಡೆಸಿದರೆಂಬ ವಾದ! ಈ ರೀತಿ ಪ್ರಕರಣಕ್ಕೆ ಅತ್ಯಂತ ಗಂಭೀರ ಸ್ವರೂಪ ಕೊಡಲು ಯತ್ನಿಸಿದ್ದಾರೆ. ಈ ವ್ಯವಹರಣೆ ನಡೆದಿರುವ ರೀತಿಯನ್ನಾದರೂ ನೋಡಿ. ತಪಾಸಣೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಯಿತು. ಯಾವ ವಿವೇಚನೆಯೂ ಇಲ್ಲದೆ ಬಂಧನಗಳಾದುವು. ಮೊದಮೊದಲು ರೈತರನ್ನು ಹೆದರಿಸಿ ಬೆದರಿಸಿ ಆರೋಪಿಗಳ ಪರ ಯಾರೂ ಸಾಕ್ಷ್ಮ ಕೊಡದಂತೆ ಮಾಡಿದರು. ಹಾವು ಹದ್ದುಗಳನ್ನು ಯಾವಾಗಲೂ ವಿರೋಧಿಸುವ ಗುಬ್ಬಚ್ಚಿ ತನ್ನ ಗೂಡಿನಲ್ಲಿ