ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೫೪
ಚಿರಸ್ಮರಣೆ

ಓದದೆಯೇ ಪುಟಗಳನ್ನು ಅವರು ತಿರುವಿದರು. ಅಲ್ಲಿ ನೆಲೆಸಿದ್ದ ನೀರವತೆಯಲ್ಲಿ ಹಾಗೆ ಹಾಳೆ ತಿರುವಿದ ಸದ್ದು ಕೂಡ ಕೇಳಿಸಿತು... ಅವರು ನಿಧಾನಿಸಿದುದು ಕೊನೆಯ ಭಾಗ ಬಂದಾಗ ಮಾತ್ರ. ಅದು ಶಿಕ್ಷೆಯ ವಿವರ.

ನ್ಯಾಯಸ್ಥಾನದ ಹಿರಿ ಗುಮಾಸ್ತೆ ಆ ಭಾಗವನ್ನು ಮಲೆಯಾಳಿ ಭಾಷೆಯಲ್ಲಿ ಕೈದಿಗಳಿಗೆ ತಿಳಿಸಿ ಹೇಳಿದ. ಒಟ್ಟಿನಲ್ಲಿ ಹೀಗತ್ತು ಶಿಕ್ಷೆ:

ರಾಜದ್ರೋಹದ ಚಟುವಟಿಕೆಯ ಅಪರಾಧಕ್ಕಾಗಿ ಮಾಸ್ತರು, ಅಪ್ಪು, ಚಿರುಕಂಡ, ಕಣ್ಣ, ಅಬೂಬಕರ್‌, ಕುಂಇಂಬು ಮತ್ತಿತರ ಇಪ್ಪತ್ತು ಜನರಿಗೆ ಐದೈದು ವರ್ಷಗಳ ಕಠಿಣ ಕಾರಾಗೃಹವಾಸ. ಕೃಷ್ಣನ್‌ ನಾಯರ್‌, ಮತ್ತಿತರ ಹದಿನೆಂಟು ಜನರಿಗೆ ಎರಡೆರಡು ವರ್ಷದ ಕಠಿಣ ಸಜೆ. ಪ್ರಭು, ಕೇಳು ನಾಯರ್‌, ಧಾಂಡಿಗ, ಚಂದು, ಅಪ್ಪುವಿನ ತಂದೆ, ಚಿರುಕಂಡನ ತಂದೆ, ಮತ್ತಿತರರಿಗೆ ಬಿಡುಗಡೆ. ಪೋಲೀಸನನ್ನು ಕೊಲೆಮಾಡಿದ ಅಪರಾಧಕ್ಕಾಗಿ ಅಪ್ಪು, ಚಿರುಕಂಡ, ಕುಂಇ೦ಬು, ಅಬೂಬಕರ್‌ ಮತ್ತು ಕುಟ್ಟಿಕೃಷ್ಣನಿಗೆ ಮರಣದಂಡನೆ. ಕೊನೆಯವನು ಅಪ್ರಾಯಸ್ಥನಾದುದರಿಂದ ಮರಣ ದಂಡನೆಯ ಬದಲು, ಕೈದಿಗಳ ಶಿಕ್ಷಣ ಶಾಲೆಗೆ ಆತನ ರವಾನೆ.

'ಪ್ರಾಣಾಂತಿಕವಾದ ಪೆಟ್ಟನ್ನು ಪೋಲೀಸನಿಗೆ ಯಾರು ಕೊಟ್ಟರೋ ಹೇಳುವುದು ಕಷ್ಟ' ಎಂಬ ಅಭಿಪ್ರಾಯ ತೀರ್ಪಿನಲ್ಲಿತ್ತು. ಹಾಗಿದ್ದರೂ ಪ್ರಾಣದಂಡನೆಯ ಶಿಕ್ಷೆ ನಾಲ್ವರಿಗೆ ದೊರೆತೇ ದೊರೆಯಿತು.

ತೀರ್ಪನ್ನೋದಿದ ನ್ಯಾಯಾಧೀಶರು, ಕೋರ್ಟಿನ ಕಾರ್ಯಕಲಾಪ ಆ ದಿನಕ್ಕೆ ಮುಕ್ತಾಯವಾಯಿತೆಂದರು. ಬಿಡುಗಡೆಯಾದ ಇಪ್ಪತ್ತೆರಡು ಜನರ ಕೈಕೋಳಗಳನ್ನು ಬಿಚ್ಚಿದುದಾಯಿತು. ಆದರೂ, ಹೊರಡಿರೆಂದರೂ ಸರಿಯದೆ, ಅವರು ಅಲ್ಲೇ ನಿಂತರು. ಸದಾಕಾಲವೂ ನಗುತ್ತಲಿದ್ದ ರಾಜಾರಾಯರು ಆಗ ಮಾತ್ರ ನಗಲಿಲ್ಲ. ಕೆಂಪಗಿನ ಅವರ ದುಂಡುಮುಖ ಜೋತುಕೊಂಡು ಕಪ್ಪಿಟ್ಟಿತು. ಆ ಕಾಲಿನಿಂದ ಈ ಕಾಲಿಗೆ ದೇಹದ ಭಾರವನ್ನು ದಾಟಿಸುತ್ತ ಅವರು ನಿಂತರು. ನ್ಯಾಯದ ಕೊಲೆ ಈ ರೀತಿ ಆದೀತೂಂತ ನನಗೆ ಗೊತ್ತೇ ಇತ್ತು ಎಂದು ಪಿಳ್ಳೆ ಗೊಣಗಿದರು. "ಅಪೀಲಿಗೆ ಏರ್ಪಾಟು ಮಾಡೋಣ. ನಿರಾಶರಾಗ್ಬೇಡಿ" ಎಂದು ಹೇಳಿ ಅವರು ವಸತಿಗೃಹಕ್ಕೆ ತೆರಳಿದರು.

ಆ ದಿನ ಬೆಳಗ್ಗೆ ಕೈದಿಗಳು ನಡೆದುಬಂದೊಡನೆ ಅವರ ಹಿಂದಿನಿಂದ ಪೋಲೀಸ್‌