ಪುಟ:Chirasmarane-Niranjana.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮ ಚಿರಸ್ಮರಣೆ

 ...ಮತ್ತೆ ಸೆರೆಮನೆಯ ಎತ್ತರದ ಪ್ರಾಕಾರಗಳ ಹಿಂದೆ ವಿರಾಮ. ಜೇಲರು ಬಂದು ಮಾತನಾಡಿಸಿದರು:
"ಅಪೀಲು ಹೋಗಿಯೇ ಹೋಗ್ತೀರಿ. ಅಲ್ಲ?" 
"ಹೌದು."
"ಸಹಜವೇ, ಬೇರೆ ಸಮಯವಾಗಿದ್ದರೆ ಇಷ್ಟು ತೊಂದರೆಯಾಗ್ತಿರ್ಲಿಲ್ಲ; ಆದರೆ ಇದು ಯುದ್ಧಕಾಲ ನೋಡಿ. ಅದಕ್ಕೇ ಹೀಗೆ..."
ಆ ಮಾತಿಗೆ ಉತ್ತರದ ಅಗತ್ಯವಿರಲಿಲ್ಲ, ಯುದ್ದವೇ. ಯುದ್ಧವಲ್ಲದೆ ಇನ್ನೇನು? ಉಳಿವಿಗಾಗಿ ಹೊಸ ಬದುಕಿಗಾಗಿ ಜನಯುಧ್ಧ. ಅದಕ್ಕಿದಿರಾಗಿ ಆಳುವವರ ಪೈಶಾಚಿಕ ದಮನದಂಡ.
 ಮರಣದಂಡೆನೆಗೆ ಗುರಿಯಾದ ನಾಲ್ವರನ್ನು ಬೇರೆ ಕೊಠಡಿಯಲ್ಲಿಟ್ಟು ಬೀಗ ಹಾಕಿದರು. ಕುಟ್ಟಿಕೃಷ್ಣ ಬೇರೆ ಕಡೆ. ಅವರಿಂದ ಪ್ರತ್ಯೇಕವಾಗಿ ಉಳಿದವರಿಗೆ ಜಾಗ. 
ಮಾಸ್ತರು ಜೇಲರನ್ನು ಕೇಳಿದರು:
"ಹೇಗೂ ಇನ್ನು ಕೆಲವೇ ದಿವಸ. ಜತೆಯಾಗೇ ಇರಬಾರ್ದಾ ?" 
"ಸಾರಿ. ಇದು ನಿಯಮ. ನಾನೇನೂ ಮಾಡೋಹಾಗಿಲ್ಲ."

ಕತ್ತಲಾಯಿತು. ಮಾತು ಕಡಮೆಯಾಗಿ ಮಂಪರು ಬಂತು. ಮಾಸ್ತರ ಜತೆಯಲ್ಲಿದ್ದ ಕಣ್ಣ, ಮಕ್ಕಳಾಗಲಿಲ್ಲವೆಂದು ಹರಕೆ ಹೊತ್ತು, ಕೊನೆಗೆ ಮಗುವನ್ನು ಪಡೆದ ರೈತ ತಾಯಿಯ ಹಾಡನ್ನು ಮೆಲುದನಿಯಲ್ಲಿ ಹಾಡಿದ. ಆ ಧ್ವನಿ ಅಡ್ಡವಾಗಿದ್ದ ಗೋಡೆಯನ್ನು ದಾಟಿ ಅಪ್ಪು ಚಿರುಕಂಡ ಮತ್ತಿತರರನ್ನು ಹೋಗಿ ತಲುಪಿತು.

 ಕಾವಲುಗಾರ ಬಂದು ಪಿಸುದನಿಯಲ್ಲಿ ಕೇಳಿದ:
 "ಬೀಡಿ ಬೇಡವಾ ಇವತ್ತು?"
ಅದನ್ನು ಪಡೆದು ಹಂಚಲು ಧಾಂಡಿಗ ಅಲ್ಲಿರಲಿಲ್ಲ. ಉತ್ತರವೇ ಸಿಗಲಿಲ್ಲ ಕಾವಲುಗಾರನಿಗೆ. ಮಾಸ್ತರು ಅಂಗೈ ಆಡಿಸಿ ಬೇಡವೆಂದು ಸನ್ನೆ ಮಾಡಿದಂತಾಗಿ, ಕಾವಲುಗಾರ ಸುಮ್ಮನಾದ.

...ಇನ್ನೊಂದು ವಾರವಾದರೂ ಈ ಸೆರೆಮನೆಯಲ್ಲೇ ಇರಬೇಕಾದೀತೆಂದು ಮಾಸ್ತರು ಭಾವಿಸಿದರು. ಕಯ್ಯೂರಿನಿಂದ ಎಲ್ಲರ ಸಂಬಂಧಿಕರೂ ಭೇಟೆಗೆ ಬರುವಂತೆ ಹೇಳಿಕಳುಹಬೇಕೆಂದು ಅವರು ಯೋಚಿಸಿದರು.

ಆದರೆ ಮಾರನೆಯ ಮುಂಜಾವದ ರೈಲುಗಾಡಿಯಲ್ಲಿ ಭದ್ರವಾದ ಸಶಸ್ತ್ರ ಕಾವಲಿನೊಂದಿಗೆ ಅವರನ್ನೆಲ್ಲ ಕಣ್ಣಾನೂರಿಗೆ ಒಯ್ಯಲಾಯಿತು.