ಪುಟ:Chirasmarane-Niranjana.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ಚಿರಸ್ಮರಣೆ

“ಈಗಾದರೂ ಮುಗಿಯಿತಲ್ಲ!" ಎಂದ ಅಪ್ಪು, ಹ್ಯದಯದೊಳಗಿನ ಬೇಗುದಿಯನ್ನು ಅಂಕೆಯೊಳಗಿಡಲು ಯತ್ನಿಸುತ್ತ.
 ಆಗಲೂ ಮುಗಿದಿರಲಿಲ್ಲ. ರಕ್ಷಣಾ ಸಮಿತಿಯ ಕಡೆಯಿಂದ ವಕೀಲರೊಬ್ಬರು ಬಂದು ಆ ನಾಲ್ವರ ಸಹಿ ಕೇಳಿದರು.
"ಇನ್ನು ಯಾವ ಕ್ರಮ ಕೈಗೊಳ್ತೀರಿ?" ಎಂದ ಚಿರುಕಂಡ.
"ಜೀವದಾನಕ್ಕೆ ಅರ್ಜಿ ಹಾಕ್ಬೇಕಲ್ಲ?"
ಅಪು ಗುಡುಗಿದ: 
"ಎಂಥ ಜೀವದಾನ? ಯಾರ ಜೀವವನ್ನು ಯಾರು ದಾನ ಮಾಡೋದು? ಒಂದೂ ಬೇಡ. ಹೋಗಿ ನೀವು!"
"ಹಾಗಲ್ಲ ಸಂಗಾತಿ!"
"ಗೌರವದಿಂದ ನಾವು ಸಾಯೋದಕ್ಕಾದರೂ ಬಿಡ್ತೀರೊ ಇಲ್ಲವೊ?" ವಕೀಲರು ವಿಫಲರಾಗಿ ಹಿಂತಿರುಗಿದರು.ಆದರೆ ಆ ಬಳಿಕ, ಮಾಸ್ತರು ಮತ್ತು ಇತರರ ನಡುವೆ ರಹಸ್ಯವಾಗಿ ಚೀಟಿ ಕಾಗದಗಳೋಡಿದುವು. ಸಂದೇಶಗಳು ಅತ್ತಿತ್ತ ಹೋಗಿ ಬಂದವು.
ಮಾಸ್ತರು ಸೈರಣೆಯಿಂದ ವಾದಿಸಿದರು:
"ಹಾಗೆ ನೋಡಿದರೆ ಆ ನ್ಯಾಯಸ್ಥಾನದಲ್ಲಿ ನಮಗೆ ನಂಬಿಕೆ ಇತ್ತೆ? ಆದರೂ ನಾವು ಅವರೆದುರು ಕೈಕಟ್ಟಿ ನಿಂತು ವಿಚಾರಣೆಗೆ ಒಳಗಾದೆವು. ಇದೆಲ್ಲ ಒಂದು ಪದ್ಧತಿ ಅಪ್ಪು. ನಮ್ಮ ಗುರಿ ಏನು? ಆ ಗುರಿಯ ಸಾಧನೆಗಾಗಿ ನೀವು ನಾಲ್ಕು ಜೀವಿಗಳು ಉಳಿಯೋದು ಬೇಡವೆ? ಜೀವದಾನ ಕೇಳುವದರಲ್ಲಿ ಅವಮಾನವಾದದ್ದೇನೂ ಇಲ್ಲ. ನಮ್ಮ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಂಡು ಸಹಿಮಾಡಿ. ದೇಶದ ಎಲ್ಲ ಕಡೆ ನಿಮ್ಮನ್ನು ಉಳಿಸಬೇಕೂಂತ ಚಳವಳಿಯೇ ಆಗ್ತಿದೆ ಅನ್ನೋದನ್ನು ಮರೀಬೇಡಿ."
ಮಾಸ್ತರು ಗೆದ್ದರು. ಅರ್ಜಿಗೆ ಆ ನಾಲ್ವರ ಸಹಿ ಬಿತ್ತು. 
ಕುಟ್ಟಿಕೃಷ್ಣನನ್ನು ದೂರದ ಬೆಜವಾಡದ ಸೆರೆಮನೆಗೊಯ್ದರು. ಉಳಿದವರು ಶಿಕ್ಷೆ ಅನುಭವಿಸುತ್ತ ದಿನ ಕಳೆದರು. ನಾಲ್ವರ ಪ್ರಾಣ ಉಳಿಸಲು ಮಾತ್ರ ರಾಷ್ಟದಾದ್ಯಂತ ಚಳವಳಿ ನಡೆಯಿತು. ಲೋಕದ ಇತರ ಪ್ರಮುಖ ನಗರಗಳಲ್ಲೂ ಕಯ್ಯೂರಿನ ಹೆಸರು ಪ್ರತಿಧ್ವನಿಸಿತು. ಆದರು ಆಳುವವರು ಮಿಸುಕಲಿಲ್ಲ. ವಿಷಮಿಸುತ್ತಿದ್ದ ವಿಶ್ವಸಮರದ  ಬೇಗೆಯಲ್ಲಿ ಸಿಲುಕಿದ್ದ ಆ ಸರಕಾರ, ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ತಲೆ