ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪ್ಪುವಿಗೆ ಒಂದು ರಾತ್ರೆ ವಿಚಿತ್ರವಾದ ಕನಸು ಬಿತ್ತು: ಕ್ರಾಂತಿಕಾರರ ಪಡೆ ಸೆರೆಮನೆಯ ಪ್ರಾಕಾರಗಳನ್ನು ಭೇದಿಸಿ ಒಳಗಿದ್ದವರ ಬೇಡಿಗಳನ್ನು ಕಳಚಿದ ಹಾಗೆ. ದೇಶದ ಉದ್ದಗಲಕ್ಕು ಬಂಧ ವಿಮೋಚನೆಯ ಜನಸೇನೆ ಚೈತ್ರಯಾತ್ರೆ ಮಾಡುತ್ತ, ಅಂಗ್ಲ ಅಧಿಕಾರಿಗಳನ್ನೂ ಅವರಿಗೆ ಅತ್ಮವನ್ನು ಮಾರಿದ್ದ ದೇಶೀಯ ಚಾಕರರನ್ನೂ ಅಳರಸರು-ಜಮೀನ್ದಾರರು-ಬಂಡವಾಳಗಾರರನ್ನೂ ಬಂಧಿಸಿದ ಹಾಗೆ....

ಕನಸನ್ನು ಚಿರುಕಂಡನಿಗೆ ಬಾಗಿಲ ಸರಳುಗಳೆಡೆಯಿಂದ ವಿವರಿಸುತ್ತ ಅಪ್ಪು ಹೇಳಿದ:

"ಹಾಗೆ ಬಂಧಿಸಿ ಸೆರೆಹಿಡಿದವರಲ್ಲಿ ನಂಬಿಯಾರ್ ಇದ್ದ ಕಣೋ. ಆತ ಗೋಳಾಡ್ತಾ,'ಅಪ್ಪು, ರಾತ್ರಿ ಶಾಲೆ ನಡೆಸೋದಕ್ಕೆ ನಾನು ಸಮ್ಮತಿ ಕೊಟ್ಟಿರಲಿಲ್ವ? ನನ್ನನ್ನು ಬಿಡಿಸಪ್ಪ'ಅನ್ತಿದ್ದ. ಆದರೆ ನಾನು,ನೀನು, ಕುಂಞಂಬು,ಅಬೂಬಕರ್ ನಾಲ್ಕು ಜನ ಭುಜದ ಮೇಲೆ ಬಂದೂಕ ಏರಿಸಿ ಕೈ ಕೈ ಹಿಡಿದು ಹಾಡ್ತಾ ನಗ್ತಾ ಮುಂದೆ ಹೋದೆವು. ಕಣ್ಣ ಎಲ್ಲರಿಗಿಂತ ಮುಂದೆ, ಸ್ವರ ಕೇಳಿಸದಷ್ಟು ದೂರ, ಬಾವುಟ ಹಿಡಿದುಕೊಂಡಿದ್ದ. ಮಾಸ್ತರೂ ಪಂಡಿತರೂ ನಮಗಿಂತ ಬಹಳ ಹಿಂದಿದ್ರು.ಪಂಡಿತರು ಮೀಸೆ ಬಿಟ್ಟಿದ್ರು ಕಣೋ...ಮಾಸ್ತರು,'ಓಡಬೇಡ್ರೋ...ನಿಧಾನವಾಗಿ ಹೋಗ್ರೋ' ಅಂತ ಕೂಗಿ ಹೇಳ್ತಿದ್ರು...ಆದರೆ ಅಷ್ಟರಲ್ಲೆ ಎಚ್ಚರವಾಯ್ತು!" ಸ್ವಾರಸ್ಯವಾಗಿದ್ದ ಆ ವಿವರಣೆಯನ್ನು ಚಿರುಕಂಡ ಆಸಕ್ತಿಯಿಂದ ಕೇಳಿ,"ಕನಸು ಅನ್ನೋದು ಯಾವಾಗ್ಲೂ ಮನಸ್ಸಿನೊಳಗಿರೋ ಯಾವುದೋ ಆಸೆಯ ಇನ್ನೊಂದು ರೂಪ"ಎಂದ. ಅಲ್ಲಿಂದ ಇನ್ನೊಂದು ಗೋಡೆಯಾಚೆಗೆ ಕುಂಞಂಬುವಿಗೆ ಆ ವಿವರ ಹೋಯಿತು. ಆತ ಅಬೂಬಕರ್ಗೆ ಅದನ್ನು ತಿಳಿಸಿದ,ಅದು ಬರೇ ಕನಸಿನ ವಿವರಣೆಯಾದರೂ ಎಲ್ಲರೂ ಉಲ್ಲಾಸಗೊಂಡರು. ಅಬೂಬಕರ್ ಹೇಳಿದ: "ನಾವು ನಾಲ್ಕು ಜನ ಇರದೇ ಹೋಗ್ಬಹುದು.ಆದರೆ ಒಂದು ದಿವಸ ಆ ರೀತಿ ಆಗೋದು, ನಂಬಿಯಾರಿಗೆ ಆ ಸ್ಥಿತಿ ಒದಗೋದೂ ಖಂಡಿತ." ಕುಂಞಂಬು, ಅಬೂಬಕರ್ನ ಮಾತನ್ನು ಚಿರುಕಂಡನಿಗೆ ದಾಟಿಸಿದ. ಆತ ಅದನ್ನು ಅಪ್ಪುವಿಗೆ ಮುಟ್ಟಿಸಿದ. ಹೀಗೆ ಸರಪಣಿ ನೆಯ್ದು ಆ ನಾಲ್ವರು ಮಾತುಕತೆಯಲ್ಲಿ ನಿರತರಾದರು.