ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೬೬
ಚಿರಸ್ಮರಣೆ

ಅಲ್ಲೇ ಇದ್ದ ಪಹರೆಯವನು ಗಟ್ಟಿಯಾಗಿ ಹೇಳಿದ:

"ಹೊತ್ತಾಯ್ತು.ಹೊರಡಿ!"

ಆ ಸೂಚನೆ ಕೇಳಿ, ಎಲ್ಲರ ಕಸಿವಿಸಿಯೂ ಹೆಚ್ಚಿತು. ಆವರೆಗಿನ ಗಾಂಭೀರ್‍ಯ‍ವೆಲ್ಲ
ಕರಗಿ ಜಾನಕಿಯ ಕತ್ತಿನ ಸೆರೆಗಳು ಬಿಗಿದು ಬಂದವು.ತುಟಿಗಳು ಕಂಪಿಸಿದುವು.

ಅಪ್ಪುವೆಂದ

"ಪಕ್ಕದ ಕೊಠಡೀಲೇ ಚಿರುಕಂಡ ಇದ್ದಾನಮ್ಮಾ. ನಾವು ಚಿಕ್ಕೋರಾಗಿದ್ದಾಗ
ನೀನು ನೇಂದ್ರ ಬಾಳೆಹಣ್ಣು ಕೊಟ್ಟಿದ್ದನ್ನ ಯಾವಾಗಲೂ ನೆನಸ್ಕೊಳ್ತಾನೆ. ಮಾತಾಡಿಸಿ<BRಹೋಗಮ್ಮಾ."

ತಾಯಿಯೂ ತಂದೆಯೂ ಚಿರುಕಂಡನತ್ತ ಚಲಿಸಿದರು.

ಅಪ್ಪು ಎರಡು ಕೈಗಳನ್ನೂ ಹೊರ ಹಾಕಿ ಜಾನಕಿಯ ತೋಳುಗಳನ್ನು
ಹಿಡಿದುಕೊಂಡ.

ಬಲು ಪ್ರಯಾಸಪಡುತ್ತ ಆಕೆ ಕೇಳಿದಳು:

"ಯಾವಾಗ?"

"ಗೊತ್ತಿಲ್ಲ ಜಾನೂ... ಭೇಟಿ ಪ್ರಾಯಶಃ ಇದೇ ಕೊನೇದು."

"ಅಯ್ಯೋ!"

"ಅಳಬೇಡ ಜಾನೂ."

ಆಕೆಯ ಕೈಗಳನ್ನು ಬಿಟ್ಟು ಮಗುವಿನ ಮುಖವನ್ನು ಬರಸೆಳೆದು ಅಪ್ಪು
ಮುದ್ದಿಸಿದ.

"ಮಗೂನ ನೋಡ್ಕೊ ಜಾನೂ."

"ಹೂಂ...."

ಹೇಳಬೇಕೆಂದಿದ್ದ ಒಂದು ವಿಷಯವನ್ನು ಹೇಳಲಾಗದೆ ಸಂಕಟಪಡುತ್ತ
ಅಪ್ಪುವೆಂದ:

"ಒಂದು ವಿಷಯ ಜಾನೂ__"

ಪಹರೆಯವನ ಸ್ವರ ಮತ್ತೂ ಜೋರಾಗಿ ಕೇಳಿಸಿತು:

"ಹೊರಡ್ರಿ. ಹೊತ್ತಾಯ್ತು!ಬೇರೆಯವರ ಹತ್ತಿರ ಯಾಕ್ರಿ ಮಾತಾಡ್ತೀರಾ
ಅಲ್ಲಿ?"

ಜಾನಕಿಯೆಂದಳು:

"ಹೇಳಿ_ಹೇಳಿ!"

"ನೀನು ಮುಂದೆ ಬೇರೆ ಯಾರನ್ನಾದರೂ_"