ಪುಟ:Chirasmarane-Niranjana.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬೭ ಚಿರಸ್ಮರಣೆ
ಜಾನಕಿ ತನ್ನ ಅಂಗೈಯಿಂದ ಆತನ ಬಾಯಿ ಮುಚ್ಚಿದಳು. ಉದ್ವೇಗದಿಂದ
ಆತ ಅದನ್ನು ತೇವಗೊಳಿಸಿದ.
ತಂದೆ-ತಾಯಿ ಚಿರುಕಂಡನನ್ನು ಮಾತನಾಡಿಸಿ ಬಂದರು.
“ಅವನ ಮನೆಯವರೂ ಬಂದಿದ್ದಾರೆ. ಎಲ್ಲರೂ ಬಂದಿದ್ದಾರೆ. ಜತೆಯಾಗೇ
ಬಂದ್ವಿ” ಎಂದ ಅಪ್ಪುವಿನ ತಂದ.
ಮತ್ತೆ ಅಳತೊಡಗಿದ ತಾಯಿಯನ್ನು ಕುರಿತು ಅಪ್ಪು ಹೇಳಿದ:
“ಅಮ್ಮಾ! ಅಳಬೇಡಮ್ಮಾ! ಮುಂದೆ ಒಂದು ದಿನ ನಮ್ಮ ರಾಜ್ಯ ಬರದೆ.
ಆಗ, ಹಿರೇ ಮಗನ್ನ ಕಾಣಿಕೆ ಕೊಟ್ಟ ವೀರಮಾತೇಂತ ನಿನ್ನನ್ನ ಪೂಜಿಸ್ತಾರೆ!"
"ಅಯ್ಯೋ!"
ಮತ್ತೆ ಪಹರೆಯವನ ಧ್ವನಿ:
"ಬುದ್ದಿ ಇಲ್ಲ ನಿಮಗೆ ? ನಡೀರಿ!"
ತಂದೆಯ ಸ್ವರ: “ಬರ್‍ತೇವೆ ಅಪ್ಪು..."
ಅವರು ಒಲ್ಲದ ಪಾದಗಳನ್ನೆಳೆದುಕೊಂಡು ಹೋದರು. ಬರಲಾರದ
ದೃಷ್ಟಿಗಳನ್ನು ಕೀಳುತ್ತ ನಡೆದರು, ಅವು ನಿಂತಲ್ಲೆ ನಿಂತ...
.....ಬೆನ್ನು ಬಾಗಿದ್ದ ಬೂಬಮ್ಮ “ಎಲ್ಲಿದ್ದೀಯೋ?” ಎಂದು ಕರೆಯುತ್ತ
ಅಳುತ್ತ ಕಿರಿಯ ಮಗನೊಡನೆ ಬಂದಳು. ಆಕೆ ಅಪ್ಪುವನ್ನು ನೋಡಿದಳು ಮುಂದೆ
ಚಿರುಕಂಡನನ್ನು, ಬಳಿಕ ಕುಂಞಂಬುವನ್ನು,
“ಬಾ ಅಮ್ಮ, ಬಾ” ಎಂದು ಅಬೂಬಕರ್ ಕರೆದ.
ರೋದಿಸುತ್ತಲೇ ಆಕೆ ಕಂಬಿಗಳೆಡೆಯಿಂದ ಕೈಹಾಕಿ ಮಗನ ಮೈದಡವಿದಳು.
ಮುಖವನ್ನು, ಮೂಗನ್ನು, ತೋಳುಗಳನ್ನು ಮುಟ್ಟಿ ನೋಡಿದಳು.
"ನಿನ್ನ ತಂದೆ ಹಾಗೆ ಮಾಡ್ತಾಂತ ನೀನು ಹೀಗೆ ಮಾಡಿಟ್ಟು ಹೋಗ್ತಿಯಲ್ಲೊ.
“ಅಳಬೇಡಮ್ಮ, ಅಬ್ದುಲ್ಲ ನಿನ್ನ ಸಾಕ್ತಾನೆ."
ಒಮ್ಮೆಲೆ ಕಿರಿಮಗನತ್ತ ತಿರುಗಿ ಬೂಬಮ್ಮ ಅಂದಳು:
“ಅವನು ನನ್ನನ್ನೇನು ಸಾಕ್ತಾನೆ, ಮಣ್ಣು ! ನನ್ನ ಮಾತು ಒಂದಾದರೂ ಕೇಳ್ತಾನಾ
ಅಂತ ನೀನೇ ವಿಚಾರಿಸು!"
“ಯಾಕೆ ಅಬ್ದುಲ್ಲ? ಅಮ್ಮನ ಮಾತು ಕೇಳೋದಿಲ್ವೇನೋ?"
ಆ ತಮ್ಮ ಒಲವು ತುಂಬಿದ ದೃಷ್ಟಿಯಿಂದ ಅಣ್ಣನನ್ನು ನೋಡುತ್ತ ರಾಗ
ಎಳೆದ:
"ಕೇಳ್ತೇನಣ್ಣ. ಆದರೆ ನಾನು ಪುಸ್ತಕ ಓದೋದು ನೋಡಿದ್ರೆ ಅಮ್ಮ ಬೈತಾಳೆ."