ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿರಸ್ಮರಣೆ
೨೬೯

“ಹೋಗ್ತಾ ಅಪ್ಪು, ಕುಂಇಂಬು, ಚಿರುಕಂಡ ಎಲ್ಲರನ್ನೂ ಮಾತಾಡಿಸ್ಕೊಂಡು ಹೋಗಮ್ಮ."

"ಹೂಂ. ನನಗೀ ಗತಿ ತಂದಿಟ್ಟೆಯಲ್ಲೋ....!"

....ಅಳುತ್ತ ಬೂಬಮ್ಮ ಕುಂಇಂಬುವನ್ನು ನೋಡಿದಳು, ಚಿರುಕಂಡನ ಗುರುತು ಹಿಡಿದಳು, ಅಪ್ಪುವಿನ ಬಳಿ ನಿಂತು ಅಂದಳು:

“ನನ್ನ ಮಗ ಇನ್ನೂ ಚಿಕ್ಕೋನು. ಅವನಿಗೇನೂ ತಿಳೀದು. ಅವನನ್ನು ಯಾವ ಹೊತ್ತಿನಲ್ಲೂ ಬಿಟ್ಟಿರ್ಬೇಡೀಪ್ಪಾ....”

ಆಕೆ ಹೋಗುತ್ತಿದ್ದಂತೆ ಕಂಪಿಸುತ್ತಿದ್ದ ಧ್ವನಿಯಲ್ಲಿ ಅಪ್ಪು ಚಿರುಕಂಡನಿಗೆ ಹೇಳಿದ: "ಒಬ್ಬೊಬ್ಬರೆ ಬಿಡ್ತಾರೆ, ಸರ್ಕಸ್ನಲ್ಲಿ ಮಾಡೋಹಾಗೆ. ಒಂದೇ ಸಲ ಅವರ್ನೆಲ್ಲ ಕಳಿಸಿದ್ರೆ ಏನಾಗ್ತಿತ್ತೊ?"

ಬರುತ್ತಿದ್ದವರು ಯಾರೆಂಬುದನ್ನು ನೋಡುತ್ತ ಚಿರುಕಂಡ ಹೇಳಿದ.

"ನನ್ನ ತಾಯಿಯನ್ನೊಮ್ಮೆ ಸಮಾಧಾನಪಡಿಸಿ ಕಳಿಸಿದರೆ ಸಾಕು. ಇವರು ಅಳೋದನ್ನು ನೋಡ್ತಿರೋದು ಎಂಥ ಹಿಂಸೆ!"

ಬಂದವರು ಕುಂಇಇಂಬುವಿನ ತಂದೆ ತಾಯಿ ಮತ್ತು ಹೆಂಡತಿ ಶ್ರೀದೇವಿಯಮ್ಮ.

ಮತ್ತೆ ಅದೇ ರೋದನ--ಮೌನವಾಗಿ ಮತ್ತು ಗಟ್ಟಿಯಾಗಿ,

"ಅಣ್ಣ ಚೆನ್ನಾಗಿದ್ದಾನ ಅಪ್ಪ?"

"ಹೂಂ ಕುಂಇಂಬು. ನಿನ್ನಣ್ಣ ಬಂದ ಸ್ಮಲ್ಪ ದಿವಸ ಸಪ್ಪಗಿದ್ದ. ಈಗ ಹುಷಾರಾಗಿದ್ದಾನೆ. ನಿನ್ನ ತಮ್ಮನಿಗೆ ಮುಂದಿನ ತಿಂಗಳು ಪರೀಕ್ಷೆ."

"ನಾರಾಯಣನನ್ನೂ ನೀಲೇಶ್ವರಕ್ಕೆ ಕಳಿಸ್ಬೇಕಪ್ಪ, ಅವನು ತುಂಬಾ ಚುರುಕು. ಅವನನ್ನು ಹೇಗಾದರೂ ಮಾಡಿ ಕಾಲೇಜಿನಲ್ಲೂ ಓದಿಸ್ಬೇಕು."

ಅಳುತ್ತಲಿದ್ದ ತಾಯಿ ಅಂದಳು:

"ನಿನ್ನ ಹೆಂಡತಿಗಿಷ್ಟು ಹೇಳು ಮಗ. ಒಂದು ದಿನವಾದರೂ ಸರಿಯಾಗಿ ಊಟ ಮಾಡಿದ್ದರೆ..."

ಶ್ರೀದೇವಿ ಭೂಮಿ ನೋಡುತ್ತ, ಕಾಲಿನ ಉಗುರಿನಿಂದ ನೆಲದ ಮೇಲೆ ಗೆರೆ ಎಳೆಯುತ್ತ, ಸೆರಗು ಕಚ್ಚಿಕೊಂಡು ಮೌನವಾಗಿ ಅಳುತ್ತಿದ್ದಳು.

ಭಾವವಿಕಾರಗಳನ್ನೆಂದೂ ತೋರಗೊಡದಿದ್ದ ಕುಂಇಂಬು ನುಡಿದ:

"ಅತ್ತೆಯ ಮನಸ್ಸು ನೋಯಿಸ್ಬೇಡ ಶ್ರೀದೇವಿ.”

ಬೇರೇನೋ ಸಂಕಟ ಬಾಧಿಸುತ್ತಿದ್ದಂತೆ ತಂದೆ ಹೇಳಿದ:

"ಆಕೆ ಇನ್ನೂ ಚಿಕ್ಕವಳು.."