ಪುಟ:Chirasmarane-Niranjana.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಳಿತ. ಇನ್ನೇನು ದಡ ಸೇರುವೆವೆಂಬ ಉತ್ಸಾಹದಲ್ಲಿ ಒಬ್ಬರೂ ಮಾತನಾಡಲಿಲ್ಲ. .... ದಡ ಸೇರಿದ ಬಳಿಕ ದೋಣಿಯನ್ನು ಇಬ್ಬರೂ ಮೇಲಕ್ಕೆಳೆದು ಪೊದೆಗಳ ಮರೆಯಲ್ಲಿ ಮಗುಚಿ ಹಾಕಿದರು. ಆ ಬಳಿಕ ಅವರು ನಡೆಯಬೇಕಾಗಿದ್ದುದು ಎರಡು ಫರ್ಲಾಂಗುಗಳ ದೂರ ಮಾತ್ರ. ಚಪ್ಪಲಿ ಕಾಣದ ಆ ಪಾದಗಳಿಗೆ ಕಲ್ಲು ಮುಳ್ಳುಗಳನ್ನು ತುಳಿಯದೆಯೇ ಹಾದಿ ಕ್ರಮಿಸುವ ಅಭ್ಯಾಸವಿತ್ತು. ನಿರೀಕ್ಷಿಸಿದ್ದ ಗುರಿ ಸಮೀಪಿಸುತ್ತಿದ್ದ ಸಂದರ್ಭದಲ್ಲಿ,ಆ ಆತುರದಲ್ಲಿ,ಹೃದಯ ಡವಡವನೆ ಹೊಡೆದುಕೊಂಡಾಗ ಮೌನ ಅರ್ಥಹೀನವಾಗಿ ಅಪ್ಪುವಿಗೆ ತೋರಿತು. ನಡೆಯುತ್ತಲಿದ್ದಂತೆಯೇ ಆತ ಕೇಳಿದ: "ಚಿರುಕಂಡ, ಯಾವ ಜಾಗ ಅಂತ ಸರಿಯಾಗಿ ಗೊತ್ತೇನೋ ನಿಂಗೆ?" "ಹೂಂ. ಆಚೆ ಹಳ್ಳಿ ಶುರುವಾಗೋದಕ್ಮುಂಚೇನೆ ಒಂದು ಚಾದಂಗಡಿ ಇಲ್ವಾ?ಅಲ್ಲೇ." ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟು ಮತ್ತೆ ಬಿಲ ಸೇರಿ ಮೌನವಾಗುವ ಮನಸ್ಸು ಚಿರಕಂಡನದು. ಅದನ್ನು ಚೆನ್ನಾಗಿ ತಿಳಿದಿದ್ದ ಅಪ್ಪು ಆ ಮೌನಕ್ಕೆ ಅವಕಾಶ ದೊರೆಯದಂತೆ ಮತ್ತೊಂದು ಪ್ರಶ್ನೆ ಕೇಳಿದ: "ಎಲ್ಲಾ ಬಿಟ್ಟು ಚಾದಂಗಡೀಲಿ ಕೂತ್ಕೊಳ್ಳೋದು? ಯಾರಿಗಾದರೂ ಸಂಶಯ ಬಂದರೆ?" ಮಾತಿನ ಸ್ವರ ಗಟ್ಟಿಯಾಗಿತ್ತು. ಮೊದಲು ಅದಕ್ಕೆ ಅಕ್ಷೇಪವೆತ್ತಿ ಚಿರಕಂಡ ಹೇಳಿದ: "ಮೆತ್ತಗೆ ಮಾತಾಡು ಅಪ್ಪು!" ತಪ್ಪು ಮಾಡಿದವನಂತೆ ಅಪ್ಪುವಿನ ಮುಖ ಅರೆಕ್ಷಣ ಬಣ್ಣ ಬದಲಾಯಿಸಿತು. ತನ್ನ ಮಾತಿನ ಪರಿಣಾಮವನ್ನು ಪರೀಕ್ಷಿಸಿ ನೋಡಿ ತಿಳಿದು ಸಂತೃಪ್ತನಾಗಿ ಚಿರುಕಂಡ ಮಾತು ಮುಂದುವರಿಸಿದ: "ಚಾದಂಗಡೀಲೇ ಸುರಕ್ಷಿತ ಅಂತ ಮಾಸ್ತರು ಹೇಳಿದ್ರು. ಹಾದಿಹೋಕರೆಲ್ಲ ಬರ್ತಾರೆ ಹೋಗ್ತಾರೆ. ಅದಕ್ಕೆಲ್ಲ ಮಹತ್ವವೇ ಇರೋದಿಲ್ಲ. ಅಲ್ದೆ ವೈರಿಗಳ ಕಡೆಯೋರು ಯಾರಾದರೂ ಬಂದರೆ ಚಾದಂಗಡಿಯವರಿಗೆ ಮೊದಲು ಗೊತ್ತಾಗ್ತದೆ." ನಾವು ಮತ್ತು ವೈರಿಗಳು....ಒಂದು ಪಕ್ಷ,ಅದಕ್ಕೆ ಇದಿರಾಗಿ ಇನ್ನೊಂದು ಪಕ್ಷ ಇದು ಸ್ವಾರಸ್ಯವಾಗಿ ಅಪ್ಪುವಿಗೆ ತೋರಿತು. ಮೈನವಿರೆಬ್ಬಿಸುವ ಹಾಗಿತ್ತು ಈ ಕದನದ ಯೋಚನೆ. ಆ ಮಾತುಕತೆ ಮನಸ್ಸಿಗೆ ಹಿತವೆನಿಸಿ ಅಪ್ಪು, ತನ್ನ ಕುತೂಹಲಕ್ಕೆ