ಪುಟ:Chirasmarane-Niranjana.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ ೨೭೧
ಆಕೆಯೇ ಅಲ್ಲವೆ ಆ ಮಾತನಾಡಿದ್ದು ? ತನ್ನ ಹೆಂಡತಿ ಬರೇ ಮುಗ್ಧ ಎಂದು
ಒಂದೊಂದು ಸಾರೆ ಅಂದುಕೊಂಡಿದ್ದ ಚಿರುಕಂಡ... ಅದು ತಪ್ಪು ಕಲ್ಪನೆ. ಇಲ್ಲಿ,
ಆಕೆಯನ್ನು ತಾನು ಸಮಾಧಾನಪಡಿಸುತ್ತಿರಲಿಲ್ಲ. ಅವಳು ತನಗೆ ಹೊಸ ಶಕ್ತಿ
ನೀಡುತ್ತಿದ್ದಳು....
“ಚಂದು ಪುನಃ ಅಂಗಡಿ ಇಟ್ಟಿದ್ದಾನಾ?"
"ಹೂಂ, ಮೊದಲಿನ ಹಾಗೇ....”
ಮೊದಲಿನ ಹಾಗೆಯ! ಆಃ ! ತನ್ನಾಕೆ ಆಡಿದ ಮಾತು. ನಿಜವಾಗಿಯೂ ಈಕೆಯ
ಜತೆಗಾರನಾಗುವ ಯೋಗ್ಯತೆ ತನಗಿತ್ತೆ? ಬದುಕಿನ ಉದ್ದಕ್ಕೂ ಇಂತಹ
ಜತೆಗಾತಿಯನ್ನು ಪಡೆಯುವಾತ ಎಷ್ಟು ಸುಖಿ!
ತಾಯಿ ರೋದಿಸುತ್ತಲೇ ಇದ್ದಳು:
“ಅಯ್ಯೋ! ಅಯ್ಯೋ ಚಿರೂ! ಅಯ್ಯೋ ಕಂದಾ!"
“ಅಮ್ಮಾ, ಅಳಬಾರದು! ನನಗೆ ಸಂಕಟವಾಗ್ತದ. ನಾನೂ ಅಳ್ಲೇನು? ಇಕೋ,
ಇವತ್ತಿನಿಂದ ಈಕೇನ ನಿನ್ನ ಮಗಳೂಂತ ಭಾವಿಸಿ ನೋಡೊಅವಳ ಸುಖವೇ
ನಿನ್ನ ಸುಖ ಅಂತ
ಮಾತು ಕಡಿಯಿತು. ಎರಡು ವರ್ಷಗಳ ಕಾಲವೆಲ್ಲ 'ಹೀಗಾದರೆ' 'ಹಾಗಾದರೆ'
ಎಂದು ಮನಸ್ಸನ್ನು ಕದಡಿದ್ದ ಯೋಚನೆ, ಏನನ್ನು ಹೇಳಬೇಕು ಎಂದು ಮಾಡಿದ್ದ
ನಿರ್ಧಾರ, ಯೋಗ್ಯವಾಗಿಯೇ ಇದ್ದುವು. ಆದರೆ ಆಡಬೇಕಾದ ಹೊತ್ತಿನಲ್ಲಿ ಸ್ವರವೇ
ಕೈಕೊಟ್ಟಿತು.
ತಂದೆ ಕೇಳಿದ:
"ದಿನ ಗೊತ್ತಾಯ್ತಾ?”
“ಇನ್ನೂ ಇಲ್ಲ.”
"ಗೊತ್ತಾದ ತಕ್ಷಣ ಹೇಳಿಕಳಿಸು. ಇನ್ನೊಮ್ಮೆ ಬರ್‍ತೇವೆ.”
ಇನ್ನು ಬರುವುದು ಬೇಡವೆನ್ನಬೇಕೆಂದಿದ್ದ ಚಿರುಕಂಡ. ಆದರೆ, ಹಾಗೆ ಹೇಳಿದರೆ
ಅವರಿಗೆಲ್ಲ ನೋವಾಗಬಹುದೆಂದು, ಆತ ಸುಮ್ಮನಾದ.
ಕುಳಿತಿದ್ದ ಅಧಿಕಾರಿ ಎದ್ದು, ನೇರವಾಗಿ ಬೇರೆ ಕಡೆ ನೋಡಿದ. ಪಹರೆಯವನ
ಅನುಜ್ಞೆ ಬಂತು:
"ಇನ್ನು ಹೊರಡಿ !"
ಕೈಯನ್ನು ಅದುಮಿದ ಅಂಗೈ, ತಾವರೆ ಹೂವಿನ ಮೇಲೆ ಬೆಳ್ಳಿ ನೀರು ನಿಂತ
ಹಾಗೆ ಕಣ್ಣುಗಳಲ್ಲಿ ಕಂಬನಿ,