ಪುಟ:Chirasmarane-Niranjana.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಆ ತಾಯಿಗೋ- ಬವಳಿ ಬಂತು. ಆಕೆಯ ಆಜೀವ ಒಡನಾಡಿಯಾದ ಗಂಡಸು ಆಧಾರವಾದ ಸೊಸೆಯೂ ತೋಳಿಗೆ ಭುಜ ಕೊಟ್ಟಳು. "ಬರ್ತೇವೆ ಚಿರೂ.... ಬರ್ತೇವೆ ಅಪ್ಪೂ. ಕುಂಞಂಬು, ಅಬೂಬಕರ್ ಬರ್ತೇವಪ್ಪಾ." ಕೊನೆಯ ಕೊಠಡಿಯಿಂದ, ಅಬೂಬಕರನ ಬಿರಿಕುಬಿಟ್ಟಿದ್ದ ಸ್ವರ: "ಕಯ್ಯೂರಿನವರಿಗೆಲ್ಲ ನಮ್ಮ ರಕ್ತನಮಸ್ಕಾರ ಹೇಳಿ, ಸಂಗಾತಿ! ನಾವು ಬದುಕಿದ್ದು ಯಾಕೆ, ಸಾಯ್ತಿರೋದು ಯಾಕೆ ಅನ್ನೋದನ್ನು ಯಾರೂ ಮರೀಬಾರದೂಂತ ಹೇಳಿ." "ಹೇಳ್ತೇವಪ್ಪಾ-" ಮತ್ತೆ ಚಿರುಕಂಡನಿಗೋಸ್ಕರವೇ ಕೊನೆಯ ನೋಟಗಳು......ಆ ಸಂದರ್ಶನವಾದ ಮೇಲೆ ನೆಲೆಸಿದ ಮೌನ ಕ್ರೂರವಾಗಿತ್ತು. ತಮ್ಮ ಸುತ್ತಲೂ ಕಾಲದ ಜೇಡ ಹೆಣೆಯುತ್ತಿದ್ದ ಕರಿಯ ಬಲೆಗಳನ್ನು ಆ ನಾಲ್ವರೂ ಒಂದಾಗಿ ಮತ್ತೆ ತೊಡೆದರು. ಒಂದೊಂದು ಕೊಠಡಿಯಿಂದಲೂ ಮಾತಿನ ಸ್ವರ ಹೊರಟಿತು. ....ಆ ದಿನ ಕಳೆದು ಒಂದು ವಾರವಾದಾಗ ಮೇಲಿನ ಅಧಿಕಾರಿಯಿಂದ ಅವರಿಗೆ ಸೂಚನೆ ಬಂತು: ಮಾರ್ಚ್ 29ರಂದು ಮರಣದಂಡನೆ.... -"ಯಾವ ವಾರ ಇವತ್ತು?" -"ಓ! ಇನ್ನು ಎರಡೇ ದಿನ!" -"ಎರಡು ದಿನ ಎರಡು ನಿಮಿಷದ ಹಾಗೆ ಕಳೀಬಾರದೆ!" -"ನನ್ನ ಮನಸ್ಸಿಗೆ ಈಗ ಸಮಾಧಾನವಾಗಿದೆ!"

                            ೧೦

ಸಂಜೆ ಸೂರ್ಯ ಮುಳುಗುತ್ತಿದ್ದ. ರಾತ್ರಿ ಕಳೆದು ಬೆಳಗಾದರಾಯಿತು. ಡಿಕ್-ಡಿಕ್-ಡಿಕ್- ಅದು ಜೇಲರನ ಬೂಟುಗಾಲಿನ ಸಪ್ಪಳ. "ನಿಮ್ಮ ರಾತ್ರೆಯ ಊಟಕ್ಕೆ ಏನು ಬೇಕು ಹೇಳಿ?" "ರಾತ್ರೆಯ ಊಟಕ್ಕೆ?" "ನಿಮಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿಸ್ತೇವೆ." "ನಮಗೇನೂ ಬೇಕಾಗಿಲ್ಲ."