“ನಿಮ್ಮ ಕೊನೇ ಆಸೆಯೇನು? ನಡೆಸಿಕೊಡ್ತೇವೆ."
"ಏನಪ್ಪ? ಏನು ಕುಂಞಂಬು? ಅಬೂಬಕರ್–? ಹೇಳಿ. ನಮ್ಮ ಕೊನೆ ಆಸೆ ತಿಳಿಸಿದರೆ ನಡೆಸಿಕೊಡ್ತಾರಂತೆ!"
ಅಬೂಬಕರ್ ನ ನಗೆ. ವ್ಯಂಗ್ಯ ಧ್ವನಿ:
"ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯ್ಬೇಕೂಂತ ನಮ್ಮ ಆಸೆ. ನಡೆಸಿಕೊಡ್ತಾರಾ ಕೇಳು ಚಿರುಕಂಡ!"
"ಆಹ್ಹಾ!"
ಆದರೂ ಅಪ್ಪೂ ಚಿರುಕಂಡನನ್ನು ಒಂದು ವಿಷಯ ಕಾಡುತ್ತಿತ್ತು: ಮಾಸ್ತರು....ಮಾಸ್ತರನ್ನು ಕಾಣುವುದು ಸಾಧ್ಯವಾದರೆ?
"ಇದೊಂದು ಆಸೆಯಿದೆ ಕುಂಞಂಬು. ಕೇಳೋಣವೇ ಅಬೂಬಕರ್?"
"ಕೇಳು ಸಂಗಾತಿ."
"ಜೇಲರೆ, ನಮಗೆಲ್ಲ ಇರುವುದೊಂದೇ ಆಸೆ.. ನಮ್ಮ ಮಾಸ್ತರೊಡನೆ ಭೇಟಿ ಏರ್ಪಾಟು ಮಾಡಿ."
ಸೆರೆಮನೆಯ ನಿಯಮಗಳು....
"ಆತ ಕೈದಿ. ಅದು ಸಾಧ್ಯವಿದೆಯೋ ಇಲ್ಲವೋ.... ಸೂಪರಿಂಟೆಂಡೆಂಟರನ್ನು ಕೇಳ್ತೇನೆ"
ಎರಡು ಜತೆ ಬೂಟುಗಳು ಸದ್ದು, ಮತ್ತೆ ಯಾರು? ಸೂಪರಿಂಟೆಂಡೆಂಟರೆ ಬಂದರೆ?
ಅವರು ಬಂದೂಕುಧಾರಿಗಳಾದ ಪಹರೆಯವರು, ನಡುವೆ ಮಾಸ್ತರು ಒಂದೊಂದು ಕೈಗೂ ಒಂದೊಂದು ಸರಪಳಿ....
ನಾಲ್ಪರೂ ಎದ್ದು ನಿಂತರು. ತರಗತಿಯ ವಿದಾರ್ಥಿಗಳ ಹಾಗೆ.
ಜೇಲರು ಬಂದು ಹೇಳಿದ:
"ಭೇಟಿಗೆ ಸಮ್ಮತಿ ಕೊಟ್ಟಿದಾರೆ. ಆದರೆ ಹೆಚ್ಚು ತಡ ಮಾಡ್ಬೇಡಿ!"
ಕಂಪಿಸುತ್ತಿದ್ದ ಧ್ವನಿಯಲ್ಲಿ ಚಿರುಕಂಡನೆಂದ.
"ನೀವೆಲ್ಲಾ ಸ್ವಲ್ಪ ದೂರ ಹೋಗ್ತೀರಾ?"
"Sorry ಭೇಟಿಯ ಸಮಯದಲ್ಲಿ ನಾವಿಲ್ಲೇ ಇರ್ಬೇಕೂಂತ ಆಜ್ಞೆಯಾಗಿದೆ."
ಅಬೂಬಕರ್ ಸಿಡಿದು ನುಡಿದ: