ಪುಟ:Chirasmarane-Niranjana.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ –ರಾಷ್ಟದ ಕೋಟಿ ಸೋದರರ–ನೆನಪು ಇನ್ನೊಮ್ಮೆ ಅವಕಾಶ ದೊರೆತರೆ ಇದನ್ನೇ ತಾನು ಮಾಡುವುದು; ಮತ್ತೂ ಇದೇ ಹಾದಿಯನ್ನೇ ತಾನು ತುಳಿಯುವುದು. ಅಬೂಬಕರ್ ಗೆ ಕುಟ್ಟಿಕೃಷ್ಣನ ಚಿತ್ರ ಕಣ್ಣೆದುರಿಗೆ ಕುಟ್ಟಿತ್ತಿದೆ. 'ಸಂಗಾತಿ' ಎನ್ನುವುದು ಸಾಲದೆಂದು, 'ಅಣ್ಣಾ' ಎಂದೂ ಆತ ತನ್ನನ್ನು ಕರೆಯುತ್ತಿದ್ದ.... ನಾಳೆ ದೇಶ ಸ್ವತಂತ್ರವಾದಾಗ ಜನರಾಜ್ಯ ಬಂದಾಗ ಆತ ಬಿಡುಗಡೆ ಹೊಂದಿ ಕಯ್ಯೂರಿಗೆ ಮರಳುವ; ಬಾಲಸಂಘದ ಬದಲು ಸ್ವಯಂ ಸೇವಕ ಪಡೆಗೇ ಆತ ನಾಯಕನಾಗುವ. "ಚಿರುಕಂಡ, ಮೀನು ಕಚ್ತದೇಂತ ನೀನು ನೀರಿಗಿಳೀದೆ ದಡದ ಮೇಲೇ ಕೂತಿರ್ತಿದ್ದೆ- ನೆನಪಿದೆಯಾ?" "ಹೂಂ" ....ನಡುರಾತ್ರಿ ಕಳೆದಿದೆ. ಪಹರೆಯವರು ಅತ್ತಿತ್ತ ಕಂದೀಲು ಹಿಡಿದು ಹೋಗಿ ಬರುತ್ತಿದ್ದಾರೆ. ಸುಂಯ್ ಗುಡುತ್ತಿದೆಯಲ್ಲ ಗಾಳಿ? ಯಾಕೆ, ಯಾರೂ ನಿದ್ರಿಸಿಲ್ಲವೆ? ಮಾಸ್ತರು, ಕಣ್ಣ, ಯಾರೂ ನಿದ್ರಿಸಿಲ್ಲವೆ? ಹಾಡು! ಅವರಿಗೆಲ್ಲ ಪ್ರಿಯವಾದ ಹಾಡು! ಅವರಿಗೆಲ್ಲ ಪ್ರಿಯನಾದ ಕಣ್ಣ ಹಾಡುತ್ತಿದ್ದಾನೆ! ಗಾಳಿಯಲ್ಲಿ ತೇಲುತ್ತ ಬಂದು ಕೊಠಡಿಯೊಳಕ್ಕೆ ಅದು ನುಸುಳುತ್ತಿದೆ. ಅಗೋ, ಬೇರೆ ಕಡೆಗಳಿ೦ದ! ಎಲ್ಲರೂ ಹಾಡುವವರೇ.. ಯಾಕೆ, ಅದು ಕಳ್ಳಕಾಕರಿರುವ ಬರಾಕು ಅಲ್ಲವೆ? ಎಂಥ ಕಳ್ಳರು? ಅವರಿಗೆ ಇದೊಂದು ಅರ್ಥವಾಗುತ್ತಿಲ್ಲವೆಂದೆ? ಅವರಿಗೇನು ಹಾಡಲು ಬರದೆಂದೆ? ಅದು ಯಾರ ಸ್ವರವೊ? ಅದು ಯಾರದೊ? ಯಾರದೊ ಅದು? "ಅಪ್ಪು, ಕೇಳಿಸ್ತಿದೆಯಾ? ಯಾರೂ ಮಲಗಿಲ್ಲ. ನಾವು ಹೊರಡುವ ಹೊತ್ತಿಗೆ ಮುಂಚೆ ಎಲ್ಲರೂ ಎಚ್ಚರವಿದ್ದು ವಿದಾಯ ಹೇಳ್ತಿದ್ದಾರೆ..." "ಹೂಂ" ಕುಂಞಂಬುವಿಗೆ ಭಾವೋದ್ವೇಗದಿಂದ ಸಂಕಟವಾಗುತ್ತಿದೆ. ಆತ, ಕತ್ತಲನ್ನು ಬೆದರಿಸಿ ಗುಡುಗುತ್ತಿದ್ದಾನೆ: "ದಲಿತಕೋಟಿಯ ಎಲುಬುಗೂಡಿನ ಮೇಲೆ ಕಟ್ಟಿದ ಈ ಸಾಮ್ರಾಜ್ಯ ಖಂಡಿತ ಪುಡಿಪುಡಿಯಾಗ್ತದೆ! ಲೋಕದೆಲ್ಲ ದುಡಿಯುವ ಜನ ವಿಜಯಪತಾಕ ಹಾರಿಸಿಯೇ ಹಾರಿಸ್ತಾರೆ!" ಗೊಗ್ಗರಸ್ವರದಲ್ಲಿ ಅದೇನನ್ನೋ ಅಬೂಬಕರ್ ಹಾಡತೊಡಗುತ್ತಾನೆ. ಅದು