ಪುಟ:Chirasmarane-Niranjana.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸತ್ತು ಬದುಕಿದ,ಬದುಕಿ ಉಳಿದ ನಿರಂಜನ * * *

'ಸತ್ತು ನೋಡು'* ಎಂದು ಸಾವನ್ನು ಸ್ವಾಗತಿಸಿ ಸವಾಲೆಸೆದ ನಿರಂಜನ ಮಾರ್ಚಿ 13, 1992ರಂದು ನಿಧನರಾದರು ; ಬದುಕಿ ಉಳಿದರು ; ಕೀರ್ತಿಶೇಷರಾದರು. ಸನಾತನ ನಿತ್ಯನೂತನ ಮಾನವಭವಿತವ್ಯಕ್ಕೆ ತಮ್ಮ ಬದುಕಿನ ಅವಧಿಯಲ್ಲಿ ಹೊಸ ಹೊಸ ಆಯಾಮಗಳನ್ನು ಕಂಡುಂಡು ತೆರದು ತೋರಿದರು.

ಬದುಕಿನುದ್ದಕ್ಕೂ ಅದೆಷ್ಟು ತುಮುಲ ತುಯ್ದಾಟಗಳು, ಸಂಘರ್ಷಗಳು! ಅದೆಷ್ಟೇ ಪ್ರತಿಬಂಧಕಗಳಿರಲಿ, ಮಾನವೀಯ ಮೌಲ್ಯಗಳನ್ನು ಬದುಕಿ ಬಾಳುವ ಛಲ ಹೊತ್ತು ಸಾಗಿದ ಬಾಲ್ಯ ಅದೆಷ್ಟು ಅರ್ಥಪೂರ್ಣ ಭಾವಪೂರ್ಣ! ಅನುಕಂಪದ ಆಮಿಷಕ್ಕಡಗದ ಆತ್ಮಪ್ರತ್ಯಯ ಆತ್ಮವಿಶಾಸಗಳ ಹೆಜ್ಜೆಗಳನ್ನಿಡುತ್ತ ಸಾಗಿದ ಆ ದಿನಗಳು ಅದೆಷ್ಟು ಚರಿತ್ರಾರ್ಹ!

ಹೃನ್ಮನಗಳ ಮಾನವೀಯ ಮಿಲನವೆಂಬಂತೆ ಬಾಳ ಸಂಗಾತಿ ಅನುಪಮಾರೊಂದಿಗಿನ ವಿವಾಹಕೂಡ ವೈಯಕ್ತಿಕ ನೆಲೆ ಮೀರಿ ಲೋಕಕ್ಕೆ ಬೆಳಕಾಗಿ ಮೂಡಿಬಂದದ್ದಾದರೂ ಅದೆಷ್ಟು ಹೃದಯಸ್ಪರ್ಶಿ !

ಬಾಳಿನುದ್ದಕ್ಕೂ ಅಂಶಾಂಶಿಕವಾಗಿ ಸತ್ಯವನ್ನು ಕಂಡುಕೊಳ್ಳುತ್ತ ಸಾಗಿದ ಉತ್ಕಂಠೆಯ ಅನುಭವ-ಅನುಭಾವಗಳ ಪಲುಕುಗಳು ಅದೆಷ್ಟು ಧ್ವನಿಪೂರ್ಣ !

Remarkable restless invincible creative spirit with seminal aesthetic sensibilities....

'ಮೃತ್ಯುಂಜಯ', 'ಚಿರಸ್ಮರಣೆ'--ನಿಜಕ್ಕೂ ನಿರಂಜನರ ಅದಮ್ಯ ಅವಿನಾಶಿ ಚೇತನಕ್ಕೆಷ್ಟು ಅನ್ವರ್ಥ!

ಮೈಸೂರು ಅಕ್ಟೋಬರ್ 25,2002 -ಡಿ.ವಿ.ಕೆ.




  • ನೋಡಿ:ಪುಟ 237