ಪುಟ:Chirasmarane-Niranjana.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೩೧

'ಅಫು'—ಒನ್ ಬೈ ಟು. ಒಬ್ಬೊಬ್ಬರ ಪಾಲಿಗೆ ಮೂರು ಮೂರು ಕಾಸು.
ತಾಯಿಯನ್ನು ಕೇಳಿ ಒಂದಾಣೆಯೋ ಆರು ಕಾಸೋ ಇಸಕೊಳ್ಳಬೇಕಾಗಿತ್ತು
ಎಂದು ಅಪ್ಪುವಿಗೆ ಎನಿಸಿತು... ಚಿರುಕಂಡ, ಮೌನ ಸರಿಯಲ್ಲವೆಂದು ಉತ್ತರವಿತ್ತ:
"ನಮ್ಮ ಹತ್ತಿರ ದುಡ್ಡಿಲ್ಲ."
ಆ ಉತ್ತರ ಅನಿರೀಕ್ಷಿತವಲ್ಲವೆನ್ನುವಂತೆ ಅಂಗಡಿಯವನೆಂದ:
"ಅಷ್ಟೇ ತಾನೆ? ನಮ್ಮ ಅಂಗಡಿಗೆ ದುಡ್ಡಿದಿದ್ದೋರು ಮಾತ್ರ ಬರ್ರ್ತಾರೆ
ಅಂದ್ಕೊಂಡ್ರಾ?"
ఆ ಮಾತು ಕೇಳಿ ಕುಳಿತಿದ್ದು ಧಾಂಡಿಗ ಗೊಳ್ಳನೆ ನಕ್ಕ. ಎದ್ದು ಒಲೆಯ ಬಳಿಗೆ
ಹೋಗಿ ತಾನು ಸೇದುತ್ತಿದ್ದ ಬೀಡಿಯ ತುಂಡನ್ನು ಬೆಂಕಿಗೆ ಎಸೆದು,
ಅಂಗಡಿಯವನನ್ನು ನೋಡುತ್ತ ಹೇಳಿದ:
"ನಾನು ಬರ್ತಿನಪ್ಪೋ. ಇವತ್ತಿಂದೂ ಲೆಕ್ಕಕ್ಕೆ ಬರೆದ್ಬಿಡು, ಎಷ್ಟಾಯ್ತು ಒಟ್ಟು?"
"ಐದಾಣೆ. ಸಾಯಂಕಾಲ ಒಂದು ಸೇರು ಅಕ್ಕಿ ತಂದ್ಕೊಡು. ಇಲ್ಲಿದ್ರೆ ನಾನು
ಉಪವಾಸ ಬಿದ್ದು ಸತ್ಹೋಗ್ತೇನೆ.ನಾಳೆ ಚಾ ಮಾಡಿ ನಿನಗೆ ಕೊಡೋರೇ
ಇರೋದಿಲ್ಲ ನೋಡು!"
ಧಾಂಡಿಗ ಮತ್ತೊಮ್ಮೆ ಗಟ್ಟಿಯಾಗಿ ನಕ್ಕು, ಹುಡುಗರನ್ನು ಪುನಃ ತೀವ್ರ
ನೋಟದಿಂದ ನೋಡಿ, ಹೊರಟುಹೋದ.
ಅಪ್ಪು ಮತ್ತು ಚಿರುಕಂಡನಿಗೆ, ಈಗ ಹೆಚ್ಚು ಸರಾಗವಾಗಿ ಉಸಿರಾಡ
ಬಹುದೆನ್ನಿಸಿತು.
ಅಂಗಡಿಯವನು ಆಗಲೇ ಚಹಾ ಮಾಡತೊಡಗಿದ್ದ, ಹುಡುಗರು ಪರಸ್ಪರರ
ಮುಖ ನೋಡಿ ಸುಮ್ಮನಾದರು.
ದೊಡ್ಡ ಡಬ್ಬವನ್ನು ಮುಟ್ಟಿ ತೋರಿಸಿ ಅಂಗಡಿಯವನೆಂದ:
"ಅವಲಕ್ಕಿ ಇದೆ, ತಿನ್ತೀರಾ?"
ಈ ರೀತಿ ಸಾಲ ಮಾಡುವುದು ಚಿರುಕಂಡನಿಗೆ ಸರಿತೋರಲಿಲ್ಲ. ಅಸಮ್ಮತಿ
ಸೂಚಿಸುತ್ತ ಆತ ಹೇಳಿದ:
"ಬೇಡ ಬೇಡ! ನಾವು ತಿಂಡಿ ತಿಂದೇ ಬಂದಿದ್ದೇವೆ."
"ಹಾಗೇ ಆಗಲಿ, ಚಾ ತಗೊಳ್ಳಿ. ದುಡ್ಡಿನ ಯೋಚ್ನೆ ಮಾಡ್ಬೇಡಿ
ಯಾವಾಗಲಾದರೂ ಕೊಟ್ಟೀರಂತೆ."
ಕಯ್ಯೂರಿನಲ್ಲೂ ಒಂದು ಪುಟ್ಟ ಹೋಟೆಲಿತ್ತು. ಮೂರು ನಾಲ್ಕು ಸಾರೆ
ಗುಟ್ಟಾಗಿ ಅಲ್ಲಿಗೆ ಹೋಗಿದ್ದ ಆ ಹುಡುಗರಿಗೆ ಅಂಗಡಿ ಚಹಾದ ರುಚಿ