ಪುಟ:Chirasmarane-Niranjana.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೪೨ ಚಿರಸ್ಮರಣೆ

   ಪಂಡಿತರಿಗೆ ನಗು ಬಂತು. 
  "ಗೊತ್ತಪ್ಪಾ. ಆದರೂ ತಿಳ್ಕೊಂಡಿರೋಣಾಂತ ಕೇಳ್ದೆ. ನಿನ್ನ ಹಾಗೆ ನಾನೂ ಹಿರೇ ಮಗ. ನನಗೆ ನಾಲ್ಕು ಜನ ತಮ್ಮಂದಿರಿದ್ದಾರೆ, ಕೊನೆಯವನು ನೀಲೇಶ್ವರ ಹೈಸ್ಕೂಲ್ನಲ್ಲಿ ಓದ್ತಿದ್ದಾನೆ. ಉಳಿದೋರೆಲ್ಲ ಈಗ  ಪ್ರಾಯಕ್ಕೆ ಬಂದಿದ್ದಾರೆ. ಆದರೂ ನೀನು  ಹೇಳೋ  ಹಾಗೆಯೇ ಅವರೆಲ್ಲ ನನಗಿಂತ ತುಂಬ ಚಿಕ್ಕೋರು ಅಂತಿಟ್ಕೊ!"

ಮಾಸ್ತರು ಮತ್ತು ಪ್ರಭು ಮುಗುಳುನಕ್ಕರು. ಅಪ್ಪು ತನ್ನ ನಡತೆ ಅಪಾರ್ಥಕ್ಕೆ ಕಾರಣವಾಗಬಾರದು ಎಂದು, ಮೆಲು ಧ್ವನಿಯಲ್ಲಿ ಹೇಳಿದ: "ನನ್ನ ಒಬ್ಬ ತಮ್ಮ ಶಾಲೆಗೆ ಹೋಗ್ತಾನೆ. ಚಿಕ್ಕೋನು ಮನೇಲೆ ಇರ್ತಾನೆ. ಮನೆಗೆಲಸ ಮಾಡ್ತಾನೆ. ಕೆಲಸ ಇಲ್ದೇ ಇದ್ದಾಗ ಅಜ್ಜೀ ಜತೆ!" "ಹಾಗೇನು?" "ಹೂಂ. ಈಗ ಒಂದು ವಾರದಿಂದ ನಮ್ಮನೇಲಿ ಗಲಾಟೆ ಕಮ್ಮಿ. ಅಜ್ಜಿ ಅವರಿಬ್ಬರನ್ನೂ ಕರಕೊಂಡು ತ್ರಿಕರಪುರಕ್ಕೆ ನಮ್ಮಮ್ಮನ ಮನೆಗೆ ಹೋಗಿದ್ದಾಳೆ." ಆ ಪಂಡಿತರು ತಾವೂ ಹುಡುಗನಾಗಿ, ಬಲು ಮುಖ್ಯ ವಿಷಯಗಳನ್ನೇ ಅಪ್ಪು ಆಡುತ್ತಿರುವನೆಂಬಂತೆ ಆತನ ಮಾತುಗಳಿಗೆ ಕಿವಿಗೊಟ್ಟರು. ಚಿರುಕಂಡನಿಗೇನೋ 'ಈ ಅಪ್ಪುವಿನದು ಶುದ್ಧ ತಲೆಹರಟೆ' ಎನ್ನಿಸಿತು. ಆ ಬಳಿಕ ಪಂಡಿತರು ಶಾಲೆ ಬಿಟ್ಟ ಆ ಹುಡುಗರು ಏನೇನು ಓದುತ್ತಿರುವರೆಂದು ಕೇಳಿದರು. ತಪ್ಪನ್ನು ಒಪ್ಪಿಕೊಳ್ಳುವ ಧ್ವನಿಯಲ್ಲಿ ಅಪ್ಪು ಹೇಳಿದ: "ನಮಗೆ ಪೇಪರು ಓದಿ ಅಭ್ಯಾಸವಿಲ್ಲ." "ಓ. ಅದನ್ನೋದಬಹುದು." ಪಂಡಿತರು ತನ್ನ ಕಡೆಗೂ ನೋಡಿದರೆಂದು ಚಿರುಕಂಡ ಹೇಳಿದ: "ಇನ್ನುಮೇಲಿಂದ ಪೇಪರು ತಪ್ಪದೆ ಒದ್ತೇವೆ." ಪಂಡಿತರು ಮುಗುಳುನಗುತ್ತಲೇ ಹೇಳಿದರು: "ಹೂನಪ್ಪಾ. ಪತ್ರಿಕೆ ಪುಸ್ತಕ ಎರಡೂ ಓದ್ಬೇಕು. ಓದಿದಷ್ಟೂ ಜ್ಞಾನ ಹೆಚ್ಚಾಗ್ತದೆ; ಓದ್ತಾ ಓದ್ತಾ ವಿಚಾರಮಾಡ್ಬೇಕು. ಇದು ಸರಿಯೆ?-ಅಂತ. ಸರಿಯಾಗಿದ್ದರೆ, ಯಾಕೆ ಸರಿ? ಅಥವಾ ತಪ್ಪೂಂತ ತೋರಿದರೆ ಯಾಕೆ ತಪ್ಪು?-ಅನ್ನೋದನ್ನೆಲ್ಲಾ ಯೋಚಿಸ್ಬೇಕು." ಉತ್ಸಾಹದಿಂದ ಚಿರುಕಂಡ 'ಹೂಂ'ಗುಟ್ಟಿದ.