ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೪
ಚಿರಸ್ಮರಣೆ


    ನೋಡಿ, ಅದನ್ನು ಎಸೆದು ಅತೃಪ್ತಿಯ ಧ್ವನಿಯಲ್ಲಿ ಹೇಳಿದ: 
"ಬರೇ ಎಳೇದು. ಒಂದು ಚೂರಾದರೂ ತಿರುಳು ಬೇಡ್ವೆ, ಅದರಲ್ಲಿ? ಸ್ವಲ್ಪ
ಬೆಳೆದಿರೋದು ತಂದಿದ್ರೆ ಏನು ಕೊಳ್ಳೆ ಹೋಗ್ತಿತ್ತೊ?" ಆ ರೈತನಿಗೆ ಕೋಪ ಬಂತು:"ನಿಮಿಷಕ್ಕೊಂದು ಮಾತಾಡ್ತೀಯಲೋ! ಈಗ್ತಾನೆ ಹೇಳ್ದೆ-ಎಳನೀರು ಕುಡಿದ್ರೆ ಊಟಕ್ಕೆ ತೊಂದರೆಯಾಗ್ತದೇಂತ." ಧಾಂಡಿಗ ಒಂದು ಬೀಡಿ ತೆಗೆದು ಹಚ್ಚಿ, ಹೊಗೆ ಆಕಾಶಕ್ಕೆ ಹೋಗುವುದನ್ನು ನೋಡುತ್ತ ಅಂದ: "ಆಗಲಿ, ಇನ್ನು ಊಟ ಅದೆಂಥದು ಹಾಕ್ತಿಯೋ ನೋಡೋಣ!" ಮಾಸ್ತರು ತಮ್ಮ ಬೀಡಿಯ ಕಟ್ಟನ್ನ ಮುಂದಿಟ್ಟು ತಾವು ಒಂದನ್ನೆತ್ತಿಕೊಂಡರು. ಪ್ರಭು ಮತ್ತು ರೈತರೂ ಕೈಹಾಕಿದರು. ಪಂಡಿತರು ಬೀಡಿ ಮುಟ್ಟಲೇ ಇಲ್ಲ.'ಅವರು ಬಹುಶಃ ಸಿಗರೇಟು ಸೇದ್ಬಹುದು'
ಎಂದು ಚಿರುಕಂಡ ಭಾವಿಸಿದ. ಆದರೆ ಸಿಗರೇಟನ್ನೂ ಅವರು ಸೇದಲಿಲ್ಲ. ಧಾಂಡಿಗ, ಹುಡುಗರನ್ನು ನೋಡುತ್ತ ಹೇಳಿದ:
"ನೀವು ಸೇದದೇ ಇದ್ರೂ ಒಂದೊಂದು ತಗೋಬೇಕು ಕಣ್ರೋ, ತಗೊಂಡು ನನ್ನಂಥವನಿಗೆ ಕೊಡ್ಬೇಕು."

ಪ್ರಭು ಮುಷ್ಟಿಯಿಂದ ಧಾಂಡಿಗನ ಬೆನ್ನಿನ ಮೇಲೆ ಗುದ್ದಿದ. ಆದರೆ ಆ ದೇಹ
ಮಿಸುಕಲಿಲ್ಲ. "ಅಯ್ಯೋ ನನ್ನ ಕೈ ಬೆರಳು ಮುರಿದೋಯ್ತು" ಎಂದು ಗುದ್ದಿದವನೇ
ಗೋಳಾಡಿದ.

  ಎಳನೀರು ತಂದ ರೈತ ಪಂಡಿತರನ್ನು ನೋಡುತ್ತ ಹೇಳಿದ:
"ನೀವೇ ಪುಣ್ಯವಂತರು, ಬೀಡಿ ಸೇದೋ ಈ ಕೆಟ್ಟ ಹವ್ಯಾಸ ನಿಮಗಿಲ್ಲ."

ಪಂಡಿತರು ಸುಮ್ಮನೆ ನಕ್ಕು, ತಲೆಯ ಹಿಂಭಾಗದಲ್ಲಿ ಅಂಗೈಗಳನ್ನಿರಿಸಿ, ಮರದ
ಕಾಂಡಕ್ಕೆ ಒರಗಿಕೊಂಡು ಮೇಲಿದ್ದ ರೆಂಬೆಗಳನ್ನೂ ಎಲೆಗಳನ್ನೂ ನೋಡಿದರು.
ಹಣ್ಣೆಲೆಯೊಂದು ಕೆಳಕ್ಕುದರಿ ಅವರ ಎದೆಯ ಮೇಲೆ ಒರಗಿತು. ಅಪ್ಪು ಕೈಚಾಚಿ
ಅದನ್ನೆತ್ತಿ ಬದಿಗೆ ಸರಿಸಿದ.

ದೂರದಿಂದ ಯಾರೋ ಕೆಮ್ಮಿದ ಸದ್ದಾಯಿತು. ಅಷ್ಟರವರೆಗೂ ವಿಗ್ರಹದಂತೆ
ಕುಳಿತಿದ್ದ ಧಾಂಡಿಗ ಸರಕ್ಕನೆ ತಿರುಗಿ, ಬರುತ್ತಿದ್ದವರು ಯಾರೆಂದು ನೋಡಿ,
ಪಂಡಿತರ ಕಾಲಿಗೆ ತನ್ನ ಬೆರಳು ಸೋಂಕಿಸಿದ. ಅವರು ತಕ್ಷಣವೆ ಪಕ್ಕಕ್ಕೆ ಹೊರಳಿ,
ತೋಳುಗಳೆಡೆಯಲ್ಲಿ ಮುಖ ಮರೆಮಾಡಿ, ನಿದ್ದೆಹೋದವರಂತೆ ನಟಿಸಿದರು.

  ಉಳಿದವರು ಗಾಬರಿಯಾಗಲಿಲ್ಲ.