ಪುಟ:Chirasmarane-Niranjana.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಪಂಡಿತರು ಮಾಸ್ತರೊಡನೆ ಮೆಲ್ಲನೆ ಅ೦ದರು: "ಆಗಲೇ ಘಂಟೆ ಐದಾಯ್ತು. ಆರೂವರೆಗೆಲ್ಲ ಕತ್ತಲಾಗ್ತದೆ ಅಲ್ವ?" "ಹೌದು; ಹೊರಟ್ಬಿಡೋಣ ಇನ್ನು." ಅಲ್ಲಿದ್ದವರಲ್ಲಿ ಒಂದು ತಂಡ ಹೊರಟುಹೋದಮೇಲೆ, ಪಂಡಿತರೂ ಉಳಿದವರೂ ಎದ್ದರು. ಗಂಡಸರು ಆಡುತ್ತಿದ್ದ ಮಾತುಗಳನ್ನೆಲ್ಲ ಅಡುಗೆಯ ಮೂಲೆಯಿಂದಲೆ ಕೇಳುತ್ತಿದ್ದ ಮನೆಯೊಡತಿ, ಚಹ ಮಾಡಲೆಂದು ಚಡಪಡಿಸಿದಳು. ಮಾತು ಅರ್ಥವಾಗದೆ ತನ್ನ ಬಳಿಯಲ್ಲೆ ನಿದ್ದೆಹೋಗಿದ್ದ ಮಗಳನ್ನು ಅವಳು ಎಬ್ಬಿಸಿದಳು. ಚಹ ತಡವಾಗುತ್ತದೆಂದು, "ಇಷ್ಟು ಹೊತ್ತು ಸುಮ್ಮಗೆ ಇದ್ದೆಯಲ್ಲ.... ಏನೂ ಬುದ್ಧಿ ಇಲ್ಲ ನಿನಗೆ!" ಎಂದು ಕೇಳಪ್ಪನ್ ಕೂಗಾಡಿದ. ಪಂಡಿತರು ಮೃದುವಾದ ಸ್ವರದಲ್ಲಿ ಅಂದರು: "ಈಗೇನೂ ಬೇಡೀಮ್ಮ, ಹೋಗ್ತ ರಾಮುಣ್ಣಿ ಹೋಟ್ಲಲ್ಲಿ ಚಾ ಕುಡಿದು ಹೋಗ್ತೇವೆ ಅಲ್ದೆ,ಹೊತ್ತಾಯ್ತು ಬೇರೆ.ಇನ್ನೊಂದ್ಸಲ ಬರ್ತೆವಲ್ಲ,ಆಗ ಇವತ್ತಿಂದೂ ಸೇರಿಸಿ ಚಾ ಕೊಟ್ಬಿಡಿ." "ಸಕ್ರೆ ಚಾಪುಡಿ ಜಾಸ್ತಿ ಇದೇಂತಾದ್ರೆ ನಾನೇನೋ ನಾಳೇನೇ ಬರ್ತೆನಪ್ಪೋ!" ಎಂದು ಧಾ೦ಡಿಗ ನುಡಿದು ಎಲ್ಲರೂ ನಗುವಂತೆ ಮಾಡಿದ. ಅಂತೂ ಅವರು ಹೊರಟರು. ಬೆಳಗ್ಗಿನ ಹೊತ್ತು ಮರದ ಕೆಳಗೆ ಕುಳಿತಿದ್ದ ಜಾಗಕ್ಕೆ ಬಂದಾಗ, ಅಪ್ಪು ಪಿಸುದನಿಯಲ್ಲಿ ಚಿರುಕಂಡನನ್ನು ಕೇಳಿದ: “ಈಗ ಪರಿಡಿತರು ಎಲ್ಲಿಗೆ ಹೋಗ್ತಾರೋ?" ಚಿರುಕಂಡನಿಗೆ ರೇಗಿತು. "ಶ್!ಹಾಗೆಲ್ಲ ಕೇಳ್ಬಾರು." "ನಮ್ಮ ಹಳ್ಳಿಗೆ ಬರೋದಾದ್ರೆ ನಾವೇ ಕರಕೊಂಡು ಹೋಗ್ಬಹುದಲ್ಲಾಂತ." ಆ ಯೋಚನೆ ಅರ್ಥಪೂರ್ಣವಾಗಿತ್ತು.ಏನೂ ಹೇಳಲು ತೋಚದೆ ಚಿರುಕಂಡ ಸುಮ್ಮನೆ ನಿಂತ. "ಮಾಸ್ತರು ಬಂದೇ ಬರ್ತಾರೆ. ಅವರನ್ನಾದರೂ ಕರಕೊಂಡು ಹೋಗೋಣ" ಎಂದು ಅಪ್ಪುವೇ ಮಾತು ಮುಂದುವರಿಸಿದ."ಏನು,ಆ ಒಡಕು ದೋಣೀಲೇ?" "ಓ.... ಆ ಜವಾಬ್ದಾರಿ ನನಗೆ ಬಿಟ್ಬಿಡು. ನೀನು ಸರಿಯಾಗಿ ನೀರು ತೆಗೀತಾ ಇದ್ರೆ ಸಾಕು."