ಪುಟ:Chirasmarane-Niranjana.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ತೇಜಸ್ವಿನಿ ನದಿಯನ್ನು ದಾಟಿ ಹುಡುಗರು ಆಚೆಯ ದಡ ಸಮೀಪಿಸಿದಾಗ ಇನ್ನೂ ಕತ್ತಲಾಗಿರಲ್ಲಿಲ್ಲ. "ಆ ಮುದುಕಪ್ಪನ ಕೈಯಿಂದ ಹ್ಯಾಗಪ್ಪಾ ತಪ್ಪಿಸ್ಕೊಳ್ಳೋದು?" ಎಂದು ಅಪ್ಪು, ಚಿರುಕಂಡನಿಗೆ ತಮ್ಮ ಮುಂದಿದ್ದ ಸಮಸ್ಯೆಯ ನೆನಪು ಹುಟ್ಟಿಸಿದ. "ಮುದುಕಪ್ಪನ ಮಗ-ಸೊಸೆ ಬೇರೆ ಮನೆಗೆ ಬಂದಿರ್ತಾರೆ ಈಗ." ಎಂದು ಚಿರುಕಂಡ ಸಮಸ್ಯೆಯ ಚಿತ್ರವನ್ನು ಪೂರ್ಣಗೊಳಿಸಿದ. ಇಬ್ಬರಿಗೂ ಹೊಳೆದುದೊಂದೇ ಉಪಾಯ-ಕತ್ತಲಾಗುವ ತನಕ ದಡ ಸೇರದೆ ಇರುವುದು. ಅಪ್ಪು, ಮೇಲಿನ ತೋಟವಿದ್ದ ಜಾಗದಿಂದಲೂ ಸ್ವಲ್ಪ ಮೇಲಕ್ಕೆ ದೋಣಿಯನ್ನು ತಿರುಗಿಸಿದ. ತೋಟದ ನಡುವೆ ಇದ್ದ ಗುಡಿಸಿಲಿನ ಹೊರಗೆ ಹೆಂಗಸೊಬ್ಬಳು ನಿಂತು ನದಿಯತ್ತ ನೋಡುತ್ತಿದ್ದುದು ಚಿರುಕಂಡನಿಗೆ ಕಂಡಿತು. ಆತ ಅಪ್ಪುವನ್ನು ಉದ್ದೇಶಿಸಿ ಹೇಳಿದ: "ಆ ಮುದುಕಪ್ಪನ ಸೊಸೆ ನಮ್ಮನ್ನೇ ನೋಡ್ತಿದಾಳೆ ಕಣೊ." "ಪಾಪ! ನೋಡದೇನು ಮಾಡಿಯಾಳು? ಅಂತೂ ಮೀನು ಬರ್ತದೇಂತ ಮೆಟ್ಟುಗತ್ತಿ ಹಿಡಿಕೊಂಡು ಸಿದ್ದವಾಗಿದ್ದಾಳೆ-ಅನ್ನು!" ಮೇಲುಗಡೆ ದಡ ಸಮೀಪಿಸಿ ಅಲ್ಲೇ ಸ್ವಲ್ಪ ಹೊತ್ತು ಅವರು ನಿಂತರು.ಕೆಲ ನಿಮಿಷಗಳಲ್ಲೇ ಕತ್ತಲಾಯಿತು.ಬಳಿಕ ಮೆಲ್ಲನೆ ದಂಡೆಯುದ್ದಕ್ಕೂ ಕೆಳಗೆ ಬಂದು,ತೋಟದ ಬಳಿ ಸದ್ದಿಲ್ಲದೆ ನೆಲ ಸೇರಿದರು.ದೋಣಿಯನ್ನು ಇಬ್ಬರೂ ಎತ್ತಿ ದಡದ ಮೇಲಿರಿಸಿದರು. ಹುಡುಗರು ಎಷ್ಟು ಎಚ್ಚರವಹಿಸಿದರೂ ಸ್ವಲ್ಪ ಸದ್ದಾಯಿತು. ಆಗ ಗುಡಿಸಲಿನ ಹೊರಗೆ ಕಂದೀಲಿನೊಡನೆ ನಿಂತು, ಮುದುಕಪ್ಪನ ಮಗ ಗಟ್ಟಿಯಾಗಿ ಹೇಳಿದ: "ಯಾರೋ ಅದು? ಅಪ್ಪುವೇನೋ? ದೀಪ ತರಲಾ? " 'ಒಳ್ಳೆಯ ಗಂಡಾಂತರ ಇದು' ಎಂದು ಹುಡುಗರ ಎದೆಗುಂಡಿಗೆ ಡವಡವನೆ ಹೊಡೆದುಕೊಂಡಿತು.ಅವರು ಉಸಿರು ಬಿಗಿ ಹಿಡಿದು ಅತ್ತಿತ್ತ ಚಲಿಸದೆ ಅಲ್ಲೇ ನಿಂತರು . ಎರಡು ನಿಮಿಷ ಹಾಗೆಯೇ ನಿಂತಿದ್ದು,ಉತ್ತರ ಬರದಿದ್ದುದನ್ನು ಕಂಡು,ದೋಣಿಯ ಒಡೆಯ ಗುಡಿಸಲಿನೂಳಕ್ಕೆ ಕಂದೀಲಿನೊಡನೆ ಹಿಂತಿರುಗಿದ.