ಪುಟ:Chirasmarane-Niranjana.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಚಿರಸ್ಮರಣೆ ಹುಣ್ಣಿಮೆ ಕಳೆದು ನಾಲ್ಕು ದಿನಗಳಾಗಿದ್ದುವು. ಚಂದಿರ ಮೂಡಲು ಇನ್ನೂ ಹೊತ್ತಿತ್ತು. ಆದರಿಂದ ಸಮಾಧಾನಪಡುತ್ತ, ಆ ಕತ್ತಲೆಯಲ್ಲಿ ಹಾದಿ ಹುಡುಕಿ ಕೊಂಡು, ಹುಡುಗರು ತಮ್ಮ ಮನೆಗಳ ಕಡೆಗೆ ಬೇಗಬೇಗನೆ ನಡೆದರು. ಅಪ್ಪುವಿನ ಗುಡಿಸಲು ಹತ್ತಿರ ಬಂದಂತೆ ಚಿರುಕಂಡನೆಂದ: "ಎಲ್ಲಿಗೆ ಹೋಗಿದ್ದೆ ಅಂತ ಕೇಳಿದ್ರೆ ಏನ್ಹೇಳ್ತೀಯಾ ಮನೇಲಿ?" 'ಅದೆಲ್ಲಾ ನೋಡ್ಕೋತೇನೆ ಬಿಡು' ಎಂದು ಹೇಳಲು ಬಾಯಿ ತೆರೆದಿದ್ದ ಅಪ್ಪು ತಡೆದು ನಿಂತು ಕೇಳಿದ: "ಏನಪ್ಪ ಹೇಳೋದು?" "ಮಾಸ್ತರು ಸಿಕ್ಕಿದ್ರು; ಅದೇನೋ ಶಾಲೆಯ ಸಾಮಾನು ಚರ್ವತ್ತೂರಿನಿಂದ ತರೋದಿತ್ತು; ಅವರ ಜತೇಲಿ ಹೋದೆವೂಂತ ಹೇಳು. ನಾಳೆ ಬೆಳಿಗ್ಗೆ ಮಾಸ್ತರು ಬಂದ ತಕ್ಷಣ, ಹೀಗೆ ಹೇಳಿದೇವೇಂತ ತಿಳಿಸಿದರಾಯ್ತು." "ಹೂ೦... ನಾಳೆ ನನಗೆಲ್ಲಿ ಸಿಗ್ತೀಯಾ?" "ನೀನು ಹೊಲಕ್ಕೆ ಹೋಗ್ತೀಯೇನು?" "ಹೌದು." "ಸರಿ, ಅಲ್ಲಿಗೇ ಬರ್ರ್ತೆನೇ. ನಿನ್ನೆ ಪಂಡಿತರು ಹೇಳಿದ್ರಲ್ಲ-ಅದನ್ನು ನಾವಿಬ್ಬರೂ ಚರ್ಚೆ ಮಾಡ್ಬೇಕು." ಚಿರುಕಂಡನ ಆ ಮಾತು ಪಿಸುದನಿಯಲ್ಲಿ ಬಂತು. "ಆಗಲಿ" ಎಂದು ಹೇಳಿ ಅಪ್ಪು, ತನ್ನ ಗುಡಿಸಲಿನ ಕಡೆಗೆ ತಿರುಗಿದ. ಅಲ್ಲಿ ಬಾಗಿಲು ತೆರೆದವಳು ಅವನ ಅಜ್ಜಿ. ಬಡಕಲು ದೇಹ, ನೆರಿಗೆ ಕಟ್ಟಿದ ಮುಖ. ತಾಳೆಯ ಗರಿಯನ್ನು ಉರುಟಾದ ಓಲೆಮಾಡಿ ಇರಿಸಿದ್ದ ಕಿವಿಯ ತೂತುಗಳು ದೊಡ್ದದಾಗಿ ಕೆಳಕ್ಕೆ ಜೋತುಕೊಂಡಿದ್ದುವು. ತಾನು ನಿರೀಕ್ಷಿಸಿದ್ದ ಬಯ್ಗಳನ್ನು ತಪ್ಪಿಸುವುದಕ್ಕಾಗಿ ಅಪ್ಪುವೇ ಮೊದಲು ಕೇಳಿದ: "ಅರೇ! ಯಾವಾಗ್ಬಂದೆ ಅಜ್ಜಿ?ನೀನು ಇಷ್ಟು ಬೇಗ ಬರ್ರ್ತೀಂತ ನನಗೆ ಗೊತ್ತೇ ಇರ್ರ್ಲಿಲ್ಲ." ನಾಲ್ಕು ದಿನಗಳಿಂದ ತಾನು ಕಂಡಿರದೆ ಇದ್ದ ಮೊಮ್ಮಗನನ್ನು ತುಂಬು ದೃಷ್ಟಿಯಿಂದ ನೋಡುತ್ತ ಅಜ್ಜಿಯೆಂದಳು: "ಮಧಾಹ್ನವೇ ಬಂದೆನಪ್ಪ. ನಿನ್ನ ಅವತಾರ ಇದೇನು?ಎಲ್ಲಿಗೆ ಹೋಗಿದ್ದೆ?ನಾನು ಇಲ್ದೇ ಇದ್ರೆ ನಿನಗೆ ಹೇಳೋರು ಕೇಳೋರು ಯಾರೂ ಇಲ್ಲಾಂತ ತಿಳಕೊಂಡ್ಯೋ?'