ಪುಟ:Chirasmarane-Niranjana.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೫೭ "ಸುಳ್ಳು ಹೇಳ್ತೀಯಾ?"

 ಯಾವ ಸುಳ್ಳನ್ನು ಹೇಗೆ ಹೇಳಬೇಕೆಂದು ಯೋಚಿಸುತ್ತ ಅಪ್ಪುವೆಂದ: "ಮಾಸ್ತರು ಶಾಲೆ ವಿಷಯ ಅದೇನೋ ಹೇಳಿದ್ರು, ಅದು ನೆನಪಾಯ್ತ್ತು," "ಯಾವಾಗ ನೋಡಿದ್ರೂ ಮಾಸ್ತರು ಮಾಸ್ತರು: ಮಾಸ್ತರು ಅಂದ್ರೆ ಅದ್ಯಾಕೆ ಹೀಗೆ ಸಾಯ್ತೀರೋ?"-ತಂದೆ ಹೇಳಿದ.

ತನ್ನ ಮಗನ ಮಾತನ್ನು ತಿದ್ದುವುದಕ್ಕೋ ಎಂಬಂತೆ ಅಜ್ಜಿ ಅಂದಳು: "ಒಳ್ಳೆಯವರು–ಪಾಪ!"

ಅಪ್ಪುವಿನ ತಾಯಿ ಕೆಲವು ದಿವಸಗಳಿಂದ ತನ್ನ ಮನಸ್ಸನ್ನು ಕಾಡುತ್ತಿದ್ದೊಂದು ವಿಷಯ ಪ್ರಸ್ತಾಪಿಸಿದಳು;

"ಮಾಸ್ತರು ಮೊನ್ನೆ, ಕುಟ್ಟಿಯನ್ನೂ ಶಾಲೆಗೆ ಕರಕೊಂಡ್ಬಾ; ಅಂತ ಚಿಕ್ಕವನ ಕೈಲಿ ಹೇಳಿದ್ರಂತೆ." ಕುಟ್ಟಿ ಅಪ್ಪುವಿನ ಕಿರಿಯ ತಮ್ಮ-ಅವರ ಬಳಗದಲ್ಲಿ ಮೂರನೆಯವನು. ತಾಯಿಯ ಮಾತಿಗೆ ತಂದೆ ಏನು ಹೇಳುವರೋ ಎಂದು ಕುತೂಹಲದಿಂದ ಅಪ್ಪು ಆತನ ಮುಖವನ್ನು ನೋಡಿದ. ಆಶ್ಚರ್ಯಪಡುವಂತಹ ಉತ್ತರವೇನೂ ಆತನಿಂದ ಬರಲಿಲ್ಲ. “ಕುಟ್ಟಿ ಈಗ್ಲೇ ಶಾಲೆಗೆ ಹೋಗಿ ಏನಂತೆ ಮಾಡೋದು? ಅವನಿಗಿನ್ನೂ ಆರು ವರ್ಷ. ಇಲ್ಲೇ ಇದ್ದರೆ ಹೋರಿಗಳನ್ನಾದರೂ ಒಂದಿಷ್ಟು ನೋಡ್ಕೊಬಹುದು. ಹುಡುಗರನ್ನೆಲ್ಲಾ ಕಳಿಸ್ಕೊಟ್ರೆ, ಇಲ್ಲಿ ಹೊಲದ ಕೆಲಸ ಮಾಡೋರು ಯಾರು? ಮಾಸ್ತರು ಮಾಡ್ತಾರೇನು ಬಂದು?" ಮಾಸ್ತರ ವಿಷಯದಲ್ಲಿ ತಂದೆ ಸಾಕಷ್ಟು ಅದರ ತೋರುತ್ತಲಿಲ್ಲ ಎಂದು ಅಪ್ಪುವಿನ ಮನಸ್ಸು ನೊಂದಿತು. ಅವನು ಅಸಹನೆಯಿಂದಲೇ ಅಂದ: "ಮಾಸ್ತರು ಯಾಕ್ಮಾಡ್ತಾರೆ ನಮ್ಮನೇ ಕೆಲಸ?"

"ಮತ್ತೆ!" 

"ಕುಟ್ಟಿ ಶಾಲೆಗೆ ಹೋಗ್ಲಿ, ಇಲ್ಲಿ ನೋಡೊಳ್ಕೊದಕ್ಕೆ ನಾನಿದ್ದೇನಲ್ಲ?" ಆಗಲೇ ಕುಟ್ಟಿಯನ್ನು ಕಳುಹಿಸಿಕೊಡಲು ತಾಯಿಗೆ ಇಷ್ಟವಿರಲಿಲ್ಲವಾದರೂ ಅಪ್ಪು ಜವಾಬ್ದಾರಿಯ ಮಾತನ್ನಾಡಿದನೆಂದು ಆಕೆಗೆ ಸಂತೋಷವಾಯಿತು. ಆದರೆ ತಂದೆಗೆ ಹಾಗನಿಸಲಿಲ್ಲ, ಓಹೋಹೋ.ಭಾರೀ ನೋಡ್ಕೋತಿದ್ದೀಯಾ ನೀನು. ಇವತ್ತೆಲ್ಲ ನೋಡ್ಕೊಂಡೇ ಇದ್ದೆ, ಅಲ್ಲ?"