ಪುಟ:Chirasmarane-Niranjana.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಚಿರಸ್ಮರಣೆ ಅಪ್ಪು ಮಾತಾಡಲಿಲ್ಲ. ಆ ದಿನವೆಲ್ಲ ತಾನು ಮಾಡಿದ ಕೆಲಸಗಳು ಮತ್ತೆ ನೆನಪಿಗೆ ಬಂದು, ಆತ ಮೌನ ತಳೆದ. ಸ್ವಲ್ಪ ಹೊತ್ತಿನಲ್ಲಿ ಎಲ್ಲರ ಊಟವು ಮುಗಿಯಿತು.ಸೀಮೆಎಣ್ಣೆ ಖರ್ಚಾಗುತ್ತದೆಂದು ದೀಪ ಆರಿಸಿ ಎಲ್ಲರೂ ಮಲಗಿಕೊಂಡರು.

ತ್ರಿಕರಪುರದಲ್ಲಿನ ತನ್ನ ಇನ್ನೊಬ್ಬಳು ಅಜ್ಜಿಯ ವಿಷಯ ಈ ಅಜ್ಜಿ ಪ್ರಾಸ್ತಾಪಿಸುವಳೇನೋ ಎಂದು ಅಪ್ಪು ನಿರೀಕ್ಷಿಸಿದ್ದ.ತನ್ನ ಅಮ್ಮನ ಅಮ್ಮನೂ ಅಪ್ಪನ ಅಮ್ಮನೂ ಸಣ್ಣಸಣ್ಣ ವಿಷಯಗಳನ್ನೆತ್ತಿಕೊಂಡು ಜಗಳಾಡುತ್ತಾರೆ ಎಂದು, ತನ್ನ ತಾಯಿ ಬೇಸರದಿಂದ ಒಮ್ಮೆ ಹೇಳಿದಿದ್ದು ಅಪ್ಪುವಿಗೆ ನೆನಪಿತ್ತು.ಅಲ್ಲದೆ, ಈ ಅಜ್ಜಿಯ ಜತೆಯಲ್ಲಿ ತಾನೂ ಒಮ್ಮೆ ತ್ರಿಕರಪುರಕ್ಕೆ ಹೋಗಿದ್ದಗಾ,ಅಂತಹ  ಜಗಳವಾಗಿದುದನ್ನು ಆತ ಕಂಡಿದ್ದ. ಈ ಸಲವೂ ವಿರಸದ ಮಾತುಗಳಾಗಿ ಅಜ್ಜಿ ಬೇಗನೆ ಅಲ್ಲಿಂದ ಹೋರಟುಬಂದಿರಬಹುದೆ?ಎಂದು ತಿಳಿಯಲು ಅಪ್ಪು  ಕುತೂಹಲಿಯಾಗಿದ್ದ. ಎಳೆಯ ಮಕ್ಕಳ ಹಾಗೆ ವಯಸ್ಸಾದವರೂ ಆಡಿಕೊಳ್ಳುವ ಜಗಳ ತಮಾಷೆಯಾಗಿರುತ್ತಿತ್ತು. ಆದರೆ ಅಜ್ಜಿ ಮೌನವಾಗಿಯೆ ಇದ್ದುದನ್ನು ಕಂಡು ಅಪ್ಪುವಿಗೆ ನಿರಾಸೆಯಾಯಿತು. ಈಗಾಗಲೇ ಒಮ್ಮೆ ತನ್ನ ತಂದೆಗೂ ತಾಯಿಗೂ ಎಲ್ಲ ವಿಷಯಗಳನ್ನೂ ಅಜ್ಜಿ ಹೇಳಿರಬೇಕು;ಪುನಃ ಅದನ್ನೇ ಈಗ ಹೇಳಲಾರಳು: ನಾಳೆ ಹಗಲುಹೊತ್ತು ಆಕೆಯೊಬ್ಬಳೊಡನೆಯೇ ಹರಟೆ ಹೊಡೆಯುತ್ತ ಆ ಊರಿನ ಸಮಾಚಾರ ತಿಳಿಯಬೇಕು-ಎಂದು ಲೆಕ್ಕಹಾಕಿದ.ಆದರೆ ಒಮ್ದು ವಿಷಯವನ್ನು ಮಾತ್ರ ಈಗಲೇ ಪ್ರಾಸ್ತಾಪಿಸಬೇಕೆನ್ನಿಸಿತು.ಅದು , ತ್ರಿಕರಪುರದಲ್ಲಿ ಆತನಿಗಿದ್ದ

ಒಬ್ಬನೇ ಸ್ನೇಹಿತನೂ ಓರಗೆಯ ಸಂಬಂಧಿಕನೂ ಆದ ಚಂದುವಿನ ವಿಷಯ, "ಅಜ್ಜೀ..."

ಅಜ್ಜಿಗೆ ನಿದ್ದೆ ಬಂದಿರಲಿಲ್ಲ, ಸಮೀಪದಲ್ಲೇ ಇದ್ದ ಆಕೆ ಮಗ್ಗಲ್ಲು ಹೊರಳಿ ಕೇಳಿದಳು:

"ಏನೋ ? ನಿದ್ದೆ ಬಂದಿಲ್ವೇನೋ?" "ಇಲ್ಲ ಅಜ್ಜೀ.."

"ಹೆದರಿಕೆಯಾಗ್ತದೇನೋ?ನನ್ನ ಹತ್ತಿರ ಮಲಕೋತ್ಯಾ?

"ಅಪ್ಪುವಿಗೆ ನಗು ಬಂತು.ಅಜ್ಜಿಯ ದೃಷ್ಟಿಯಲ್ಲಿ ತಾನಿನ್ನೂ ಎಳೆಯ ಕೂಸೇ. "ಊಹು೦.. ಅದಲ್ಲ ಅಜ್ಜಿ, ಚಂದೂನ ನೋಡಿದ್ಯಾ?" ಮೊಮ್ಮಗ ಹತ್ತಿರ ಬರಲಿಲ್ಲವೆಂದು ಬೇಸರಗೊಂಡರೂ ವೃದ್ಧೆ ಹೇಳಿದಳು: "ಹೂ೦ ಕಣೋ, ಚೆನ್ನಾಗಿದ್ದಾನೆ."