ಪುಟ:Chirasmarane-Niranjana.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ "ನನ್ನ ವಿಷಯ ಏನಾದರೂ ಕೇಳಿದ್ನಾ?" "ನಿನ್ನ ವಿಷಯ ಹೇಳೋಕೆ ಕೇಳೋಕೆ ಅಂಥಾದೇನೋ ಇರೋದು?" ವಿಷಯಗಳೆಷ್ಟೋ ಇದ್ದುವು.ಅಜ್ಜಿಗೆ ಗೊತ್ತಿರಲಿಲ್ಲ,ಅಷ್ಟೆ.ಆಕೆಯ ಅಜ್ಞಾನಕ್ಕಾಗಿ ಕನಿಕರಿಸಿ ಅಪ್ಪು ಸಣ್ಣಗೆ ನಕ್ಕ. ಮೊಮ್ಮಗ ಸುಮ್ಮನಿದ್ದುದನ್ನು ಕಂಡು ಅಜ್ಜಿಯೇ ಹೇಳಿದಳು:

"ಚಂದು ಈಗ ಬೀಡಿಯಂಗಡಿ ಇಟ್ಟಿದ್ದಾನೆ. ದಿನಕ್ಕೆ ಎರಡಾಣೆ ಮೂರಾಣೆ ಸಂಪಾದನೆಯಾಗ್ತದೆ."

"ಓ!" ಎಂದು ಅಪ್ಪು ಉದ್ಗಾರವೆತ್ತಿದ. ಈ ಸಂಭಾಷಣೆಯೊಂದು ಇಷ್ಟವಾಗದೆ ಆತನ ತಂದೆಯೆಂದ:

"ಸಾಕು ಮಾತಾಡಿದ್ದು, ಮಲಕ್ಕೊಳ್ಳಿ!"
ಮತ್ತೆ ಅಪ್ಪು ಮಾತನಾಡಲಿಲ್ಲ.ಅಜ್ಜಿಯೂ ಮುಂದುವರಿಯಲಿಲ್ಲ.ಚಂದುವಿನ ಬಗೆಗೆ ಅಜ್ಜಿ ಕೊಟ್ಟ,ಸುದ್ದಿಯನ್ನು ಅಪ್ಪು ಮೆಲುಕುಹಾಕಿದ.ಆತನ ನೆನಪಿನ ಚಿತ್ರಶಾಲೆಯೊಳಗೆ ನುಸುಳಿಬಿಟ್ಟಿದ್ದ,ಚಂದು.ಒಮ್ಮೆಲೆ ಅಪ್ಪುವಿಗೆ, ಚಂದುವನ್ನು ಕಾಣಬೇಕೆಂಬ ಬಯಕೆಯಾಯಿತು. ಆತನೊಡನೆ ಮಾತನಾಡುವುದು ಸುಲಭ. ಅವನು ಚಿರುಕಂಡನ ಹಾಗಲ್ಲ. ತನ್ನ ಈಗಿನ ಅನುಭವಗಳನ್ನೆಲ್ಲ, ತಲೆಯೊಳಗೆ ಸುತ್ತುತ್ತಿದ್ದ ವಿಚಾರಗಳನ್ನೆಲ್ಲ ಚಂದುಗೆ ಹೇಳಿದರೆ,ಆತ ಎಲ್ಲವನ್ನೂ ಕೇಳಿ ಬೆಕ್ಕಸಬೆರಗಾಗುವುದು ಖಂಡಿತ.ತಾನು ಆತನ ದೃಷ್ಟಿಯಲ್ಲಿ ಪ್ರಮುಖನಾಗಿ ತೋರುವುದರಲ್ಲಿ ಸಂದೇಹವಿಲ್ಲ.

ಆ ಬೆಳಗ್ಗೆ ಬೇಗನೆ ಏಳಬೇಕೆಂದು ಹಿಂದಿನ ರಾತ್ರೆ ಚಿರುಕಂಡ ಹೇಳಿದ್ದರೂ ಏಳುವೆನೆಂದು ತಾನು ಮಾತುಕೊಟ್ಟಿದ್ದರೂ ಅಪ್ಪುವಿಗೆ ಎಚ್ಚರವಾಗಿರಲಿಲ್ಲ, ಚಿರುಕಂಡನೇ ಬಂದು ಎಬ್ಬಿಸಿದ್ದ. ತಾಯಿ, ಬೇಯಿಸಿದ ನೇಂದ್ರಬಾಳೆಯ ಹಣ್ಣುಗಳನ್ನು ತಮಗೆ ಕೊಟ್ಟಿದ್ದಳು. ಆಲ್ಲಿಂದ ಅವರಿಬ್ಬರೂ ಹೊರಟಿದ್ದರು. ಯಾವುದೋ ದೇಶಕ್ಕೆ ಯಾತ್ರೆ ಹೋದಹಾಗೆ, ನದಿ ದಾಟಿದುದು, ಚಹದಂಗಡಿ ರಾಮುಣ್ಣಿ, ಧಾಂಡಿಗ-ಬಳಿಕ ತಾವು ಕಂಡ ನಾಯಕ ಪಂಡಿತರು, ಜಮೀನ್ದಾರರ ಬಂಟನೊಬ್ಬ ಕೆಮ್ಮುತ್ತ ಬಂದುದು,ಆ ಊಟ,ಪಂಡಿತರು, ನಡೆಸಿದ ಸಭೆ.... ಒಂದೊಂದೂ ಎಂತಹ ಅನುಭವವಾಗಿತ್ತು! ಈ ದಿನವೇ ಬೆಳಗ್ಗಿನಿಂದ ಹಿಡಿದು ಸಂಜೆಯೊಳಗೆ ಇಷ್ಟೆಲ್ಲ ಆಯಿತೆ? ಎಂಬುದನ್ನು ನಂಬುವಂತೆಯೇ ಇರಲಿಲ್ಲ.ಆದರೂ ಅದು ನಿಜವಾಗಿತ್ತು.ಜನರ ಸಂಘಟನೆ,ಹೋರಾಟ,ಕ್ರಾಂತಿ,ದೇಶದ ಸ್ವಾತಂತ್ರ್ಯ.... ಪಂಡಿತರ ವಾತ್ಸಲ್ಯಪೂರ್ಣ ದೃಷ್ಟಿ.... ಆ ಧಾಂಡಿಗ...