ಪುಟ:Chirasmarane-Niranjana.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಚಿರಸ್ಮಣೆ

 ಧಾಂಡಿಗನ ಯೋಚನೆ ಬಂದಾಗ ಅಪ್ಪು ಸದ್ದು ಮಾಡದೆ ಕತ್ತಲಲ್ಲೆ ನಕ್ಕ. ನೋಡಲು ಭಯೋತ್ಪಾದಕ. ಮನಸ್ಸು ಮಗುವಿನ ಹಾಗೆ. ಆಡುತ್ತಿದ್ದುದೆಲ್ಲ ಪರಿಹಾಸ್ಯದ ಮಾತು. ಒಂದೊಂದನ್ನು ಕೇಳಿದಾಗಲೂ ನಗುಬರುತ್ತಿತ್ತು.
 ಅಪ್ಪು ಈಗ ನಕ್ಕಾಗ ಸದ್ದಾಗಿರಲಿಲ್ಲ, ನಿಜ. ಆದರೆ ದೇಹ ಕುಲುಕಿ ಮಿಸುಕಿದ ಹಾಗಾಯಿತು.
 ಹೊರಗಿನ ಬೆಳದಿಂಗಳು ಒಳಗೆ ತೂರಿ ಉಂಟಾದ ಮಬ್ಬು ಬೆಳಕಿನಲ್ಲಿ ಆ ಸೂಕ್ಷ್ಮ ಚಲನವನ್ನು ಇನ್ನೂ ಎಚ್ಚರವಿದ್ದ ಆತನ ತಂದೆ ಗಮನಿಸಿ ಹೇಳಿದ:
 "ಅಪ್ಪು, ನಿದ್ದೆ ಬಂದಿಲ್ವೇನೋ?"
  ಅಪ್ಪು ಉಸಿರು ಬಿಗಿಹಿಡಿದ. ಮಾತನಾಡಲಿಲ್ಲ, ಹುಡುಗ ನಿದ್ದೆಹೋಗಿರಬೇಕು, ಎಂದುಕೊಂಡ ತಂದೆ.
  ಆದರೆ ಅಜ್ಜಿ ತನ್ನ ಮಗನನ್ನು ಕೇಳಿದಳು:
  "ನಿನಗೆ ನಿದ್ದೆ ಬಂದಿಲ್ವ ಇನ್ನೂ?" 
  "ಇಲ್ಲ..." ಎಂದ ತಂದೆ ಕ್ಷೀಣಸ್ವರದಲ್ಲಿ.
  "ಏನು ಯೋಚಿಸ್ತಿದ್ದೀಯಾ?"
  "ಏನೂ ಇಲ್ಲ." 
   ಹಾಗೆ ಹೇಳಿದಮೇಲೆ ಒಂದು ನಿಮಿಷ ಸುಮ್ಮನಿದ್ದು ತಂದೆಯೇ ಅಂದ: 
  "ಏನಾದರೂ ಮಾಡಿ ಅಪ್ಪೂನ ನೀಲೇಶ್ವರದ ಹೈಸ್ಕೂಲಿಗೆ ಕಳಿಸ್ಬೇಕಾಗಿತ್ತಮ್ಮ. ಮೆಟ್ರಕ್ಕು ಮಾಡ್ಕೊಂಡಿದ್ರೆ ಮಾಸ್ತರ ಕೆಲಸ ಸುಲಭವಾಗಿ ಸಿಗ್ತಾ ಇತ್ತು. ಈ ಗೇಣಿ ಹೊಲ ನೆಚ್ಕೊಂಡು ಎಷ್ಟು ಜನ ಇರೋಕಾಗ್ತದೆ?"
   ಮಗನ ಮಾತು ನಿಜವೆಂದು ತಿಳಿದಿದ್ದ ಅಜ್ಜಿ ಮರುಮಾತನಾಡಲಿಲ್ಲ. ತಂದೆಯೇ ಮುಂದುವರಿಸಿದ:
  "ಈಗೇನೂ ಮಾಡೋಹಾಗಿಲ್ಲ. ಹೊಲಕ್ಕಾದರೂ ಅವನನ್ನು ದಿನಾ ಕರಕೊಂಡು ಹೋಗ್ಬೇಕು. ಇಲ್ದಿದ್ರೆ ಮೈಗಳ್ಳನಾಗ್ತಾನೆ. ಪೋಲಿ ಸಹವಾಸಕ್ಕೆ ಬಿದ್ದು ಕೆಟ್ಟುಹೋಗ್ತಾನೆ...."
   ಅಜ್ಜಿಯೆಂದಳು:"ಹಾಗೇ ಮಾಡಿದರಾಯ್ತು. ಈಗ ಅದೆಲ್ಲಾ ಯೋಚ್ನೆ ಮಾಡ್ದೆ ಸುಮ್ನೆ ಮಲಕೋ ನೀನು."
   ಮತ್ತೆ ಮೌನ ನೆಲಸಿತು. ತಂದೆಯ ಮಾತುಗಳನ್ನು ಕೇಳಿ ಅಪ್ಪುವಿನ ಹೃದಯದಲ್ಲಿ ವಿವಿಧ ಭಾವನೆಗಳು ಮೂಡಿದುವು. ತನ್ನ ಬಗೆಗೆ, ಭವಿತವ್ಯದ ಬಗೆಗೆ, ತಂದೆ ಅಷ್ಟೊಂದು ಆಳವಾಗಿ ಯೋಚಿಸುತ್ತಿದ್ದನೆಂಬ ವಿಷಯವೇ ಆತನಿಗೆ