ಪುಟ:Chirasmarane-Niranjana.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೬೧ ತಿಳಿದಿರಲಿಲ್ಲ. ಈ ರಾತ್ರಿಯೂ, ತನಗೆ ಎಚ್ಚರವಿದ್ದುದು ಗೊತ್ತಿದ್ದರೆ ಆತ ಮಾತನಾಡುತ್ತಲೇ ಇರಲ್ಲಿವೇನೋ..ಹೈಸ್ಕೂಲಿಗೆ ಕಳಿಸದೇ ಇದ್ದುದು ತಪ್ಪು ಎನ್ನುತ್ತಾನೆ ತಂದೆ. ಹಾಗೆ ಆತ ಹೇಳಿದುದೇ ಎಷ್ಟೋ ಸಮಾಧಾನದ ವಿಷಯ. ತಾನು ಮತ್ತು ಊಪಧ್ಯಾಯ ವೃತ್ತಿ !ತಮ್ಮ ಪ್ರೀತಿಪಾತ್ರ ಮಾಸ್ತರರ ಹಾಗೆ ತಾನೂ ಹುಡುಗರಿಗೆ ಪಾಠ ಹೇಳಿಕೊಡುವುದು. ಆ ಯೋಚನೆ ಸಾರಸ್ಯಕರವಾಗಿತ್ತು. ಆ ಬಳಿಕ ತಂದೆ ವ್ಯಕ್ತಪಡಿಸಿದ ಭೀತಿ -ತಾನು ಮೈಗಳ್ಳನಾಗುವುದು ಇಲ್ಲವೆ ಪೋಲಿ ಸಹವಾಸಕ್ಕೆ ಬಿದ್ದು ಕೆಟ್ಟುಹೋಗುವುದು. ತಾನು ಮತ್ತು ಮೈಗಳ್ಳತನ-ಪೋಲಿ ಸಹವಾಸ... ತಂದೆ ಹಾಗೆ ಹೇಳಿದನೆಂದು ಅಪ್ಪುವಿಗೆ ಕೆಡುಕೆನಿಸಿತು. ಆದರೆ ತಾನು ಪೋಲಿಯಾಗುವುದನ್ನು ಚಿತ್ರಿಸಿಕೊಂಡು ನಗುಬಂತು.. ಮಿಂಚಿಹೋದುದಕ್ಕೆ ಚಿಂತಿಸಿ ಫಲವಿಲ್ಲ-ಎನ್ನುವಂತೆ ತಂದೆ ಮಾತನಾಡಿದ. ಅರ್ಥವಿಲ್ಲದ ಮಾತು. ಏನೂ ಮಿಂಚಿಹೋಗಿರಲಿಲ್ಲ, ಪ್ರತಿಯೊಂದು ಇದೇ ಈಗ ಆರಂಭವಾಗಿತ್ತು. ಇದೇ ಈಗ. ತನ್ನ ಮನಸ್ಸಿನಲ್ಲಿದುದನ್ನೆಲ್ಲ ತನ್ನ ಯೋಚನೆಗಳನ್ನೆಲ್ಲ, ತಂದೆಗೆ ಹೇಳಬೇಕೆಂದು ಅಪ್ಪುವಿಗೆ ಆಸೆಯಾಯಿತು. ಆದರೆ ಆ ಆಸೆಯ ಜತೆಯಲ್ಲೆ, ಆತ ತನಗೆ ಅಡ್ಡಿ ಒಡ್ಡಬಹುದೆಂಬ ಭಯ ಮೂಡಿತು. ಅಪ್ಪು ನಿಧಾನವಾಗಿ ಯೋಚಿಸಿದ;

ತನ್ನ ಪಾಲಿಗೆ ಶಾಲೆಯ ಓದು ಇನ್ನಿಲ್ಲವಾದರೂ ತಾನು ಓದಬೇಕು; ತುಂಬಾ ಓದಬೇಕು. ತಾನು ದುಡಿಯಬೇಕು; ತುಂಬಾ ದುಡಿಯಬೇಕು. ತನ್ನ ಮನೆಗೋಸ್ಕರ ಮಾತ್ರವಲ್ಲ, ಜನರಿಗೋಸ್ಕರ-ರಾಷ್ಟಕ್ಕೋಸ್ಕರ ದುಡಿಯಬೇಕು. ಸಾಹಸದ ಕೆಲಸಗಳನ್ನು ಮಾಡಿ ತಾನು ಒಳ್ಳೆಯವನಾಗಿ ಪ್ರಸಿದ್ಧಿಗೆ ಬರಬೇಕು-ಮಾಸ್ತರರ ಹಾಗೆ. ಪಂಡಿತರ ಹಾಗೆ, ಅವರು ಹೇಳಿದ ಎಷ್ಟೋ ವೀರರ ಹಾಗೆ. ಪೋಲಿ! ಪೋಲಿಯಲ್ಲ - ಕ್ರಾಂತಿಕಾರಿ ತಾನು...!

.ತಣ್ಣನೆ ಗಾಳಿ... ಹಸುರು ಬಯಲು... ತುಂಬಿ ಹರಿಯುವ ನದಿ. ಬಾಣದಂತೆ ಅದನ್ನು ಸೀಳಿ ದಾಟುತ್ತಿದ್ದ ಪುಟ್ಟ ದೋಣಿ... ಅದರಲ್ಲಿ ಸಾಹಸಿಯಾದ ತಾನು -ತಾನೊಬ್ಬನೆ-ಅಪ್ಪುವೊಬ್ಬನೇ... ತಿಳಿವು, ಕಲ್ಪನೆ ಭ್ರಮೆಗಳೊಡನೆ ಬೆರೆತು ಕರಗಿ ಮಾಯವಾಯಿತು. ಅರಿವು, ತೂಗುಸೇತುವೆಯಲ್ಲಿ ಜೋಲಿ ಹೊಡೆಯುತ್ತ ಮರೆವಿನೊಡನೆ ಸೇರಿಕೊಂಡಿತು. ಅಪ್ಪುವಿಗೆ ನಿದ್ದೆ ಬಂತು.