ಪುಟ:Chirasmarane-Niranjana.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೬೭ "ಪರವಾಗಿಲ್ಲಮ್ಮ , ಮಧ್ಯಾಹ್ನ ಪಟ್ಟಾಗಿ ಹೊಡೆದಿದ್ದೇನೆ." ಅದು ಪೂರ್ಣ ಸತ್ಯವಾಗಿರಲಿಲ್ಲ; ಆದರೆ ತಾಯಿಗೆ ಆ ಮಾತಿನಿಂದ ಸಮಾಧಾನವಾಗುವುದೆಂದು ಚಿರುಕಂಡನಿಗೆ ಗೊತ್ತಿತ್ತು. ತಾಯಿ ಸುಮ್ಮನಾದಳು. ಒಂದು ಸ್ ಕ್ಷಣ ಗಾಳಿ ಬೀಸಲಿಲ್ಲ. ತಾಯಿ ಮಗ ಮುಂದೇನು ಮಾತನಾಡುವರೊ ಎಂದು ಕುತೂಹಲ ತಳೆದು ಕಿವಿಯೊಡ್ಡಿ ನಿಂತಂತೆ, ಬಾಳೆಯ ತೆಂಗಿನ ಮರಗಳು ಸ್ತಬ್ದವಾದುವು ಮತ್ತೆ ಗಾಳಿ ಬೀಸಿತು. ಮೊದಲಿನದೇ ಕಚಕಚ ಪಟಪಟ ಟಿಪಟಿಪ. ತಾಯಿ, ನಿಧಾನವಾಗಿ ಬಿಡಿಬಿಡಿಯಾಗಿ ಹೇಳಿದಳು: "ನಿಮ್ಮ ತಂದೆಗೆ ತುಂಬ ಚಿಂತೆಯಾಗಿದೆ ಚಿರೂ." "ನನಗೆ ಗೊತ್ತಮ್ಮಾ." ಆ ಉತ್ತರವನ್ನು ಇದಿರು ನೋಡದೇ ಇದ್ದ ತಾಯಿಗೆ ಆಶ್ಚರ್ಯವಾಯಿತು. "ಏನು ಗೊತ್ತು?" "ನಾವೀಗ ತುಂಬಾ ತೊಂದರೇಲಿದ್ದೇವೆ ಅಂತ." "ಎಂಥಾ ತೊಂದರೆ ಹೇಳು?" "ನಮ್ಮ ಹೊಲ ಕೈಬಿಟ್ಟು ಹೋಗೋ ಸ್ಥಿತೀಲಿದೆ, ಅಲ್ವ ಅಮಾ?" ಮಾತನಾಡುತ್ತಿದ್ದವನು ನಿಜವಾಗಿಯೂ ತನ್ನ ಮಗನೆ? ಎಂದು ತಾಯಿ ದಿಗ್ಭ್ರಮೆಗೊಳ್ಳುವಹಾಗಿತ್ತು ಆ ಉತ್ತರ. "ನಿಂಗೆ ಯಾರು ಹೇಳಿದ್ರು ಹಾಗಂತ?" ಚಿರುಕಂಡ, ತಾನಿನ್ನು ಎಳೆಯ ಕೂಸಲ್ಲ--ಎನ್ನುವಂತೆ ಹೇಳಿದ: "ನನಗೆ ಅಷ್ಟು ಗೊತ್ತಾಗಲ್ವ ಅಮ್ಮ?" ಅರೆಕ್ಷಣ ಒದಗಿದ ಸಂಕಟದ ನೆನಪೇ ಮರೆತು, ತಾಯಿ ಮಗನ ಮುಖವನ್ನು ತನ್ನೆದೆಗೆ ಒತ್ತಿಕೊಂಡು, "ನನ್ಕಂದ" ಎಂದಳು. ಮತ್ತೆ ಆಕೆಗೆ ನೇರವಾಗಿ ಕುಳಿತುಕೊಳ್ಳುವವರೆಗೂ ಚಿರುಕಂಡ ಉಸಿರಿಗಾಗಿ ಚಡಪಡಿಸಿದ. ಆ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದ್ದ ಮಗನ ಮುಖವನ್ನೇ ನೋಡುತ್ತ ತಾಯಿ ಕೇಳಿದಳು: "ನಿನಗೆ ಇನ್ನೂ ಏನೇನು ಗೊತ್ತಿದೆ, ಚಿರೂ?" ಚಿರುಕಂಡ ಸಣ್ಣಗೆ ನಕ್ಕು ಸುಮ್ಮನಿದ್ದ. 'ಎಷ್ಟೋ ವಿಷಯಗಳು ಗೊತ್ತಿವೆ' ಆದರೆ ನಿನಗೆ ಹೇಳೋ ಹಾಗಿಲ್ಲ'--ಎಂದು ಮನಸ್ಸಿನಲ್ಲೇ ಅಂದುಕೊಂಡ.