ಪುಟ:Chirasmarane-Niranjana.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೬೯ ಚಿರುಕಂಡ ಉಸಿರು ಬಿಗಿಹಿಡಿದು, ಮಲಗಿದನು ಯಾರೆಂದು ನೋಡಲು ಯತ್ನಸಿದ. ಆದರೆ ಮುಖ ಕಾಣಿಸಲಿಲ್ಲ. ಕೊನೆಗೆ ಜಮೀನ್ದಾರರ ಆದೇಶದಂತೆ ಆಳುಗಳು, ಆ ರೈತನನ್ನು ಹಿಡಿದೆಬ್ಬಿಸಿದರು. ಆತ ಮುಖ ಜೋತುಹಾಕಿ ನಿಂತುಕೊಂಡ. ಆ ಮುಖದ ತುಂಬ ಮಣ್ಣಿತ್ತು. ಹಣೆಯ ಗಾಯದಿಂದ ಸುರಿದ ರಕ್ತವೂ ಕಣ್ಣೀರೂ ಮಣ್ಣಿನೊಡನೆ ಬೆರತು, ಅದನ್ನು ಗಾರೆಯಾಗಿ ಮಾಡಿ ಮುಖಕ್ಕೆ ಅಂಟಿಸಿದ್ದುವು. ಜಮೀನ್ದಾರರು ಸಿಗರೇಟನ್ನು ಕೆಳಕ್ಕೆಸೆದು ತುಳಿದು, ಆತನ ಬಳಿಗೆ ಹೋಗಿ ಕತ್ತು ಹಿಡಿದು ಕುಲುಕಿದರು. "ನಾಳೆ ಸಾಯಂಕಾಲದೊಳಗೆ ಇನ್ನೂರು ರೂಪಾಯಿ ತಂದು ಒಪ್ಪಿಸದೇ ಹೋದ್ರೆ ನಿನ್ನನ್ನು ಪೋಲೀಸರಿಗೆ ಕೊಡ್ತೇನೆ!" ಗುಂಪು ಚೆದುರಿತು. ಕೆಲವರು ಆ ರೈತನನ್ನು ಹಿಂಬಾಲಿಸಿದರು. ಯಾಕೆ ಹೀಗಾಯಿತೆಂದು ತಿಳಿಯಲು ಬಯಸಿ, ಹತ್ತಿರದಲ್ಲಿದ್ದ ಒಬ್ಬ ಹುಡುಗನನ್ನು ಚಿರುಕಂಡ ಕೇಳಿದ: “ಯಾಕೆ ಹೊಡೆದ್ರು ಅವನಿಗೆ." "ಯಾಕೊ! ಯಾರಿಗೆ ಗೊತ್ತು!" ಎಂದ ಆ ಹುಡುಗ. ಅವನೂ ತಮಾಷೆ ನೋಡಲು ಬಂದು ನಿಂತಿದ್ದನೇ ಹೊರತು, ಅದೇನೆಂದು ತಿಳಿದುಕೊಂಡಿರಲಿಲ್ಲ. ಆದರೆ ಜನರ ಬಾಯಿಗಳಿಂದ ವಿವಿಧ ಮಾತುಗಳು ಕೇಳಿಸಿದುವು. "ಅವನ್ದೇ ತಪ್ಪು, ತೋಟ ಬಿಟ್ಟಿಟ್ಟು ಯಾಕೆ ಹೋಗ್ಬೇಕಾಗಿತ್ತು?" "ಹೆಂಡ್ತಿಗೆ ಕಾಯಿಲೇಂತ ಹೋದ್ನಂತೆ ಕಣಪ್ಪೋ." "ತೋಟ ಸೂರೆ ಮಾಡೋರು ಯಾರೂಂತ?" "ತೆಂಗಿನಕಾಯಿ, ಹಲಸಿನಕಾಯಿ, ಬಾಳೆಗೊನೆ, ತರಕಾರಿ--ಒಂದೂ ಬಿಟ್ಟಿಲ್ವಂತ ನೋಡಪ್ಪ." "ರಾತಾರಾತ್ರೆ ಅದನ್ನೆಲ್ಲಾ ಪರವೂರಿಗೆ ಹಾಗೆ ಸಾಗ್ಸಿದ್ರೋ?" "ಅವನೇ ಕದ್ದು ಮಾರ್ಬಿಟ್ಟು ಬಂದಿದ್ದಾನೋ ಏನೋ." "ಅಥವಾ, ಕಳುವಿನ ಮಾಲೆಲ್ಲಾ ಜಮೀನ್ದಾರರ ಮನೆಯೊಳಗೇ ಇದೆಯೋ!" ಆ ಕೊನೆಯ ಮಾತಿಗೆ ಉತ್ತರವಾಗಿ ಮೌನ ನೆಲೆಸಿತು. ಆ ಮೌನಕ್ಕೆ ಭಂಗ ತಂದು ಯಾರೋ ಒಬ್ಬರು ಗಟ್ಟಿಯಾಗಿ ನಕ್ಕರು. "ಅಲ್ಲ, ನಾಳೆ ಸಾಯಂಕಾಲದೊಳಗೆ ಪರಿಹಾರ ಕೊಡೋಕ್ಕೆ ಅವನಿಗೆ ಇನ್ನೂರು ರೂಪಾಯಿ ಯಾರು ಕೊಡ್ತಾರೇಂತ?" "ಸಾಲ ತಗೋಬೇಕು."