ಪುಟ:Chirasmarane-Niranjana.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಚಿರಸ್ಮರಣೆ "ಯಾರಪ್ಪ ನಮ್ಮ ಹಳ್ಳೀಲಿ ಅಷ್ಟು ಸಾಲ ಕೊಡೋರು?" "ಇನ್ಯಾರು? ಜಮಿನ್ದಾರ್ರೆ!" ಆ ಮಾತು ಕೇಳಿ ಈ ಸಲ ಇಬ್ಬರು ಮೂವರು ನಕ್ಕರು. "ಅಂತೂ ನಾಲ್ಕು ವರ್ಷ ಜಮೀನ್ದಾರರ ಕಾಡು ಕಡಿದೂ ದುಡಿದೂ ಅವನು ತೋಟ ಮಾಡ್ದ. ಈಗ ಕಳ್ಳತನ ಆಯ್ತೂಂತ ಕಾರಣ ಹೇಳಿ ಅವನನ್ನ ಓಡಿಸ್ಟಿಡ್ತಾರೆ." ಹಾಗೆ ಹೇಳಿದವನು ಮಾತಿನ ಜತೆಯಲ್ಲೇ ನಿಟ್ಟಿಸಿರುಬಿಟ್ಟ. ಆಗ ಚಿರುಕಂಡನನ್ನು ಮುಖ್ಯವಾಗಿ ಬಾಧಿಸಿದ ಸಮಸ್ಯೆಯೊಂದೇ: ದುಡ್ಡು ಒಪ್ಪಿಸದೇ ಹೋದರೆ ಪೋಲೀಸರಿಗೆ ಕೊಡ್ತೇನೆ--ಎಂದಿದ್ದರು ಜಮೀನ್ದಾರರು. ಆದರೆ ಅವರ ಹಳ್ಳಿಯಲ್ಲಿ ಪೋಲೀಸರು ಇರಲಿಲ್ಲ. ಅಂದಮೇಲೆ ಪೋಲೀಸರಿಗೆ ಒಪ್ಪಿಸೋದು ಹೇಗೆ ಸಾಧ್ಯ? ಎತ್ತರದ ಕೆಂಪು ಟೋಪಿ ಇಟ್ಟುಕೊಂಡ ಪೋಲೀಸಿನವನು ದೂರದ ಪಟ್ಟಣದಿಂದ ಎಂದಾದರೊಮ್ಮೆ ಬರುವುದನ್ನು ಚಿರುಕಂಡ ಕಂಡಿದ್ದ. ಆಗ ಹುಡುಗರೆಲ್ಲ ಮರೆಯಾಗಿ ನಿಂತು ಅವನನ್ನು ನೋಡುತ್ತಿದ್ದರು... ಈಗ ರೈತನನ್ನು ಬಂಧಿಸುವುದಕ್ಕೋಸ್ಕರ ಪಟ್ಟಣದಿಂದ ಪೋಲೀಸರು ಬರುವರೊ, ಅಥವಾ ಅಲ್ಲಿಗೇ ಅವನನ್ನು ಒಯ್ದು ಕೊಡುವರೊ? ಈ ಸಂದೇಹ ಪರಿಹಾರವಾಗಲೆಂದು ಹತ್ತಿರದಲ್ಲಿದ್ದೊಬ್ಬ ರೈತನನ್ನು ಆತ ಕೇಳಿದ: "ಮಾವ, ಪೋಲೀಸರು ಬಂದಿದ್ದಾರಾ?" "ಎಲ್ಲರೂ ಆ ಪ್ರಶ್ನೆ ಕೇಳಿದ ಹುಡುಗನತ್ತ ನೋಡಿದರು. ಆ ರೈತ ಉತ್ತರವಿತ್ತ: "ಯಾರಿಗೆ ಗೊತ್ತು?" ಆದರೆ ಗುಂಪಿನಿಂದ ಬೇರೆ ಯಾರೋ ಒಬ್ಬರು ಹೇಳಿದರು: "ಬಂದಿದ್ದರೂ ಇರಬಹುದು. ಜಮೀನ್ದಾರರ ಅಪ್ಪಣೆ ಪಡೆಯೋದಕ್ಕೆ ಅವರ ಮನೆಯೊಳಗೆ. ಕೂತಿದ್ದಾರೋ ಏನೋ!" ಕಡು ಬೇಸರವೆನಿಸಿ ಚಿರುಕಂಡ ಮನೆಗೆ ಬಂದ. ಜಮೀನ್ದಾರರು ತುಂಬಾ ಕೆಟ್ಟವರೆಂಬುದು ಆತನ ಅಭಿಪ್ರಾಯವಾಗಿತ್ತು. ಮನೆಗೆ ಬಂದವನೇ ಹೊಲದಿಂದ ಆಗತಾನೆ ಹಿಂದಿರುಗಿದ ತಂದೆಗೆ ತಾನು ನೋಡಿದುದೆಲ್ಲವನ್ನೂ ಹೇಳಿದ. ಆದರೆ ತಂದೆ ಯಾವ ಆಸಕ್ತಿಯನ್ನೂ ತೋರಲಿಲ್ಲ, ಅಸಡ್ಡೆಯಿಂದ "ಹೂಂ" ಎಂದನು ಮಾತ್ರ. ತನ್ನ ತಂದೆ ಜಮೀನ್ದಾರರನ್ನು ಜರೆಯಬಹುದು ಎಂದು ಚಿರುಕಂಡ ಭಾವಿಸಿದ್ದ. ಆದರೆ ತಂದೆ ಅಂಥದೇನನ್ನೂ ಮಾಡಲಿಲ್ಲ. ಆಗ ಮಗನಿಗೆ ನಿರಾಶೆಯಾಗಿತ್ತು. ...ಅದು ತಾನು ಸಣ್ಣವನಾಗಿದ್ದಾಗ ನಡೆದದ್ದು.