ಪುಟ:Chirasmarane-Niranjana.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಎಲ್ಲಾ, ಮುಗೀಬೇಕಾದರೆ ಇಷ್ಟು ತಡ' ಎಂದಿದ್ದ ತಂದೆ. ಹಾಗೆಂದರೆ ಏನು? ಏನಾಯಿತು? ತಾಯಿ, ತಟ್ಟೆಗಳಿಗೆ ಗಂಜಿ ಸುರಿದಳು. ಬಾಳೆ ಎಲೆಯ ಒಣಗಿದ ಚೂರುಗಳ ಮೇಲೆ ಉಪ್ಪನ್ನೂ ಉಪ್ಪಿನಕಾಯಿಯ ಸಣ್ಣ ಒಂದೊಂದು ಹೋಳನ್ನೂ ಬಡಿಸಿದಳು. ಎರಡು ತುತ್ತು ಉಂಡಾದ ಮೇಲೆ ತಂದೆ ಹೇಳಿದ: "ಇವತ್ತಿನಿಂದ ನಾವು ಜಮೀನ್ದಾರರ ಒಕ್ಕಲು,ಕಲ್ಯಾಣಿ." ಆ ಸ್ವರ ತಡವರಿಸಿತು. ಕಣ್ಣುಗಳಲ್ಲಿ ನೀರು ತುಂಬಿತು. ಕಲ್ಯಾಣಿ ಮಾತನಾಡಲಿಲ್ಲ. ತನ್ನ ಕತ್ತನ್ನು ಯಾರೋ ಹಿಸುಕಿದ ಅನುಭವವಾಗಿ ಆಕೆ ಮಂಕು ಕವಿದಂತೆ ನಿಂತಳು. ಚಿರುಕಂಡ, ತಂದೆಯ ಮಾತಿನ ಅರ್ಥವನ್ನು ಗ್ರಹಿಸಿದ. ತಂದೆ ತಾಯಿಯನ್ನು ಹೆಸರು ಹಿಡಿದು ಕರೆಯುವ ಪದ್ದತಿಯೇ ಇರಲಿಲ್ಲ, ಆದರೆ ಈಗ ಬದುಕಿನೊಂದು ಇರುಕಟ್ಟಿನ ಕ್ಷಣದಲ್ಲಿ, ತನ್ನನ್ನು ಕೈಹಿಡಿದಿದ್ದ ಹೆಣ್ಣನ್ನು ಆತ ಹೆಸರೆತ್ತಿ ಸಂಬೋಧಿಸಿದ್ದ. ಮತ್ತೆರಡು ತುತ್ತ್ತು ಉಂಡು ತಂದೆ ಎದ್ದುಬಿಟ್ಟ. "ನನಗೆ ಸಾಕು!" ಚಿರುಕಂಡನಿಗೂ ಗಂಟಲು ಒತ್ತರಿಸಿ, ಏಳಬೇಕೆನ್ನಿಸಿತು. ಆದರೆ ಹಾಗೆ ಎದ್ದರೆ,ತಾಯಿ ಊಟವನ್ನೇ ಮಾಡಲಾರಳೆಂದು ಭಾವಿಸಿ,ಆತ ಅಲ್ಲಿಯೇ ಕುಳಿತ. ತಾಯಿ ನಿಟ್ಟುಸಿರು ಬಿಟ್ಟು ಮಗನನ್ನು ಕೇಳಿದಳು: "ನಿನಗೆ ಇನ್ನೂ ಒಂದಿಷ್ಟು ಗಂಜಿ ಇಕ್ಲೇನೋ?" "ಬೇಡ.ಹಸಿವಿಲ್ಲ," ವಯಸ್ಸಾದವರ ಧ್ವನಿಯ ಹಾಗಿತ್ತು ಚಿರುಕಂಡನ ಆ ಸ್ವರ, ಅದನ್ನು ಕೇಳಿ ಆತನಿಗೇ ಆಶ್ಚರ್ಯವಾಯಿತು. ತಂದೆ ಬಿಟ್ಟು ಎದ್ದಿದ್ದ ತಟ್ಟೆಯ ಎದುರಲ್ಲೇ ಕುಳಿತು ತಾಯಿ ಉಣ್ಣತೊಡಗಿದಳು. ಆಕೆಯ ಕಣ್ಣುಗಳಿಂದ ಎರಡು ತೊಟ್ಟ ಕಣ್ಣೀರು ಬಟ್ಟಲಿನೊಳಕ್ಕೆ ಧುಮುಕಿದುದನ್ನು ಚಿರುಕಂಡ ನೋಡಿದ.ದುಃಖಕ್ಕೆ ಶ್ರುತಿ ಹಿಡಿಯುತ್ತ ಸಿಂಬಳ ಆಕೆಯ ಮೂಗಿನೊಳಗೆ ಗೊರಗೊರವಾಡುತ್ತಿದ್ದುದ್ದೂ ಆತನಿಗೆ ಕೇಳಿಸಿತು. ....ಅಂತೂ ಊಟ ಮುಗಿಯಿತು. ಮಲಗುವುದಕ್ಕೆ ಮುಂಚೆ ಎಲೆ ಅಡಿಕೆ ಹಾಕಿಕೊಳ್ಳುವುದು ಚಿರುಕಂಡನ ತಂದೆಯ ಅಭಾಸ. ಈ ರಾತ್ರೆ ಆತ ಅದರ