ಪುಟ:Chirasmarane-Niranjana.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ 2.8. ಗೊಡವೆಗೆ ಹೋಗಲಿಲ್ಲ. ತಾಯಿಯೂ ತಂದುಕೊಡಲಿಲ್ಲ. ಅತ್ಯಂತ ದುಃಖದ ಆ ಸನ್ನಿವೇಶದಲ್ಲಿ, ಗೋಳಾಡದೆ ಚೀರಾಡದೆ ಭಾರವಾದ ಹೃದಯಗಳನ್ನು ಬಿಗಿಹಿಡಿದು ತನ್ನ ತಾಯಿ ತಂದೆ ವರ್ತಿಸುತ್ತಿದ್ದುದನ್ನು ಕಂಡ ಚಿರುಕಂಡ ಮೂಕನಾದ. ಕಲ್ಯಾಣಿ ಎಂದಿನಂತೆ ಅಗಲವಾದ ಎರಡು ಚಾಪೆಗಳನ್ನು ಬಿಡಿಸಿದಳು. ಎರಡನ್ನೂ ಒಂದರ ಬದಿ ಇನ್ನೊಂದಕ್ಕೆ ತಗಲುವಂತೆ ಜೋಡಿಸಿ, ಹರಿದ ಬಟ್ಟೆಗಳನ್ನು ಅದರ ಮೇಲೆ ಹಾಸಿದಳು. ಹೊದೆದುಕೊಳ್ಳಲೆಂದು ನಾಲ್ಕಾರು ತೂತುಗಳಿದ್ದ ಕಂಬಳಿಗಳನ್ನೂ ತಂದಿಟ್ಟಳು. ಹೊರಹೋಗಿ ಬಂದು, ಬಾಗಿಲ ತಡಿಕೆ ಮುಚ್ಚಿ, ಗಂಡನನ್ನು ಆಕೆ ಕೇಳಿದಳು: "ದೀಪ ಆರಿಸಲಾ?" "ಹೂಂ," ಯಾವುದೋ ಆಳದಿಂದೊಂದು ಧ್ವನಿ ಬೇಕೋ ಬೇಡವೋ ಎಂಬಂತೆ ಕ್ಷೀಣವಾಗಿ ಉತ್ತರವಿತ್ತ ಹಾಗೆ. ....ಹಿಂದೆಯಾದರೆ ಚಾಪೆಯ ಮೇಲೆ ಮೈ ಚಾಚಿದೊಡನೆ ಚಿರುಕಂಡ ನಿದ್ದೆ ಹೋಗುತ್ತಿದ್ದ, ಈ ದಿನ ಕತ್ತಲಲ್ಲಿ, ಕಣ್ಣು ತೆರೆದೇ ಮಲಗಿದ. ಹೆತ್ತವರ ಸಂಭಾಷಣೆಯನ್ನು ಕೇಳಬೇಕೆಂದು, ಕಿವಿ ತೆರೆದೇ ಮಲಗಿದ. ಬೆಳದಿಂಗಳು ಗುಡಿಸಲಿನ ಸುತ್ತಲೆಲ್ಲ ಪಸರಿಸಿತು.ಸೂರುಗಳೆಡೆಯಿಂದಲೂ ಗೋಡೆಯ ಬಿರುಕುಗಳೆಡೆಯಿಂದಲೂ ಚಂದ್ರಕಿರಣಗಳು ಒಳಕ್ಕೆ ಇಣಿಕಿ 'ಸಂತೋಷವಾಗಿದ್ದೀರಾ?' ಎಂದು ಕೇಳಿದುವು. ಆದರೆ ಒಳಗೆ ಯಾರೂ ಉತ್ತರ ಕೊಡುವ ಸ್ಥಿತಿಯಲ್ಲಿರಲಿಲ್ಲ. ಯಾರಿಗೂ ಅವುಗಳ ಕಡೆಗೆ ಗಮನವಿರಲಿಲ್ಲ. ಒಂದು ಜೀವದ ಜರ್ಜರಿತ ಹೃದಯದಿಂದ,ಮುಟ್ಟಿದರೆ ಮುರಿಯುವ ಎಳೆಯ ತಂತುಗಳಾಗಿ ಮಾತುಗಳು ಹೊರಟು ಇನ್ನೊಂದು ಜೀವದತ್ತ ಸಾಗಿದುವು; "ಜಮೀನ್ದಾರ ಇಷ್ಟು ಕ್ರೂರಿಯಾಗ್ಬಹುದೂಂತ ನಾನು ಭಾವಿಸಿರ್ಲಿಲ್ಲ, ಕಲಾಣಿ." "ಹೋಗಲಿ ಬಿಡಿ, ಅದನ್ನೇ ಮನಸ್ಸಿಗೆ ಹಚ್ಕೋಬೇಡಿ...." "ಹಿರಿಯರಿಂದ ಬಂದ ಆಸ್ತೀನ ಕಳಕೊಂಡೆನಲ್ಲ,ನಾನು ಎಂಥವನೂಂತ?" "................." "ನಿನ್ನೆ ನಾವು ಸ್ವಂತ ಆಸ್ತಿ ಇದ್ದ ರೈತರು. ಊರಲ್ಲಿ ನಮಗೆ ಮಾನ ಮರ್ಯಾದೆ ಸಿಗ್ತಿತ್ತು. ಇವತ್ತು ನಾವು ಧನಿಗಳ ಒಕ್ಕಲು, ಗುಲಾಮರು..." ಕಲ್ಯಾಣಿ ನಿಟ್ಟುಸಿರು ಬಿಟ್ಟಳು.